ಕಲಬುರಗಿ; ಸೋಮವಾರ ಕಲಬುರಗಿ ನಗರದ ವಿವಿಧೆಡೆಯಲ್ಲಿ 3 ತಂಡಗಳೊಂದಿಗೆ ಕಾರ್ಯಾಚರಣೆ ಮುಂದುವರೆಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮತ್ತೆ 4 ಜನ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳ ವ್ಹಿ ಪಾಟೀಲ ಅವರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೆÇಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಕೇಂದ್ರಗಳು ಮತ್ತು ತೆರೆದ ತಂಗುದಾಣಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಜುಳ ವ್ಹಿ. ಪಾಟೀಲ ಇವರ ನೇತೃತ್ವದಲ್ಲಿ ಭಿಕ್ಷಾಟನೆ ಹಾಗೂ ಬಾಲಕಾರ್ಮಿಕತೆಯಲ್ಲಿ ತೊಡಗಿರುವ ಮಕ್ಕಳ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಯಿತು.
ಭಿಕ್ಷಾಟನೆಯಲ್ಲಿ ಮಕ್ಕಳನ್ನು ತೊಡಗಿಸುವುದು ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಸತತ ನಡೆಸಲಾಗುವುದು. ಕಳೆದ ಒಂದು ವಾರದಿಂದ ರಕ್ಷಿತ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು. ಮಕ್ಕಳ ಹಿತದೃಷ್ಟಿಯಿಂದ ಮಕ್ಕಳ ಪಾಲಕರಿಗೆ ತಿಳುವಳಿಕೆ ಮೂಡಿಸಿ ಮಕ್ಕಳ ಪುನರ್ವಸತಿ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಬ. ಶೀಲವಂತರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಕಾಂತ್ ಬಿರಾದಾರ್, ಸದಸ್ಯರಾದ ಧನಲಕ್ಷ್ಮೀ ಮತ್ತು ಶ್ರೀಮತಿ ರಜಿಯಾ ಬಳಬಟ್ಟಿ, ಅಧೀಕ್ಷಕಿ ನಾಜಿನಿಮ್ ಹಾಜರಿದ್ದರು.