ಕಲಬುರಗಿ: ಚಿಂಚೋಳಿ ಕ್ಷೇತ್ರದ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಐತಿಹಾಸಿಕ ಬಹೆಬೂಬ್ ಸುಬಾನಿ ದರ್ಗಾ ಪ್ರವೇಶ ದ್ವಾರಕ್ಕೆ ಪೊಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಒಂದು ವಾರಕ್ಕೆ ಕಾಲಿಟ್ಟಿದ್ದು, ಇಲ್ಲಿಯ ವರೆಗೆ ಕ್ಷೇತ್ರದ ಶಾಸಕ ಅವಿನಾಶ್ ಜಾಧವ್, ಎಸ್.ಪಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಟಕಲ್ ಠಾಣೆಯ ಕೆಲ ಸಿಬ್ಬಂದಿಗಳು ಎರಡು ತಿಂಗಳ ಹಿಂದೇ ಗ್ರಾಮಸ್ಥರ ವಿರೋಧ ನಂತರವು ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ರಾತ್ರೋರಾತ್ರಿ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾಕ್ಕೆ ಇರುವ ಪರಂಪರಾಗತವಾಗಿರುವ ಹಳೆ ದಾರಿಗೆ ಪೊಲೀಸರು ಅಡ್ಡಲಾಗಿ ತಡೆಗೋಡೆ ಕಟ್ಟಿಸಿ ಗ್ರಾಮದಲ್ಲಿ ಕೋಮು ಸಾಮರಸ್ಯ ಕೊಡುವುದಕ್ಕೆ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಪೊಲೀಸರೇ ಮಾಡಿದ್ದಾರೆ.
ಹಳೆ ದಾರಿ ಬಿಡಬೇಕು ಎಂದು ರಟಕಲ್ ಗ್ರಾಮ ಪಂಚಾಯತಿ ಸಭೆಯಲ್ಲಿ ನಿರ್ಣಯಕೈಗೊಂಡಿದೆ ಮತ್ತು ವಕ್ಫ ಬೋರ್ಡ್ ದಾಖಲೆಗಳು ಸಹ ಇದ್ದು, ಪೊಲೀಸ್ ಇಲಾಖೆ ಪರಿಗಣಿಸದೇ ಅಸಡೆ ತೋರಿಸಿ ಜನರ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ.
ಕಳೆದ ವಾರದದಿಂದ ಗ್ರಾಮಸ್ಥರು ರಟಕಲ್ ಗ್ರಾಮ ಪಂಚಾಯತಿ ಆವರಣದಲ್ಲಿ ಶಾಂತಿಯುತವಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಕ್ಷೇತ್ರದ ಶಾಸಕ ಡಾ. ಅವಿನಾಶ್ ಜಾಧವ್ ಅವರು ಭೇಟಿ ನೀಡದೇ ತಲೆಮರಿಸಿಕೊಂಡು ಗ್ರಾಮದಲ್ಲಿ ವಿವಾದ ಸೃಷ್ಟಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಅನುಮಾನ ಸೃಷ್ಟಿಯಾಗುತ್ತಿದೆ.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಶಾಸಕ ಮತ್ತು ಎಸ್.ಪಿ ನೇರ ಹೊಣೆಗಾರರು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಬಸಪ್ಪ ಮಮಶೇಟಿ ಎಚ್ಚರಿಕೆ ನೀಡಿದ್ದಾರೆ.
ತಕ್ಷಣವೇ ಕ್ಷೇತ್ರದ ಶಾಸಕರು ಮತ್ತು ಎಸ್.ಪಿ ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಇತ್ಯರ್ಥ ಪಡಿಸಿ ಯಾವುದೇ ಕುಂಟುನೆಪ ಹೇಳದೆ ದರ್ಗಾಕ್ಕೆ ಇರುವ ಪರಂಪರೆಗತವಾಗಿರುವ ಹಳೆ ದಾರಿಯನ್ನೇ ಬಿಡಬೇಕು ಎಂದು ಸತ್ಯಾಗ್ರಹ ನಿರತ ನೂರಾರು ಮಹಿಳೆಯರು ಸೇರಿದಂತೆ ಗ್ರಾಮಸ್ಥರ ಆಗ್ರಹಿಸಿ ಸತ್ಯಾಗ್ರಹ ಮುಂದುವರೆಸಿದ್ದಾರೆ.