ಕಲಬುರಗಿ: ಬಸವಣ್ಣನವರ ವಚನ ಕ್ರಾಂತಿಯನ್ನು ಇಡೀ ಜಗತ್ತಿಗೆ ಮುಟ್ಟಿಸಿದ ಕೀರ್ತಿ ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಪರ ಜಿಲ್ಲಾಧಿಕಾರಿ ರಾಚಪ್ಪ ಕುಂಬಾರ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ನಗರದ ಡಾ. ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ನಿತ್ಯ ಜೀವನದ ಭಾಗವಾಗಬೇಕು.ಮಹಾತ್ಮರ ದಿನಾಚರಣೆ ಮೂಲಕ ಅವರನ್ನು ಸ್ಮರಿಸುವುದರ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಫ.ಗು. ಹಳಕಟ್ಟಿ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ, ಮನೆ, ಮಠಗಳಿಗೆ ತೆರಳಿ ವಚನದ ಕಟ್ಟು ಹಾಗೂ ತಾಡೋಲೆಗಳನ್ನು ಸಂಗ್ರಹಿಸಿದ ಫ. ಗು. ಹಳಕಟ್ಟಿ ಸ್ಥಾಪಿಸಿದ ಬಿಎಲ್ಡಿಇ ಸಂಸ್ಥೆ, ಶ್ರೀ ಸಿದ್ಧೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಬರಗಾಲ ನಿವಾರಣಾ ಕೇಂದ್ರ, ನೇಕಾರ ಅಭಿವೃದ್ಧಿ ಸಂಘ, ಬೂತನಾಳ ಕೆರೆ ಇವೆಲ್ಲವುಗಳು ಈಗ ಶತಮಾನೋತ್ಸವ ಕಂಡಿರುವುದು ಹಳಕಟ್ಟಿಯವರ ಶ್ರಮದ ಫಲ ಎಂದು ಅಭಿಪ್ರಾಯಪಟ್ಟರು.
ಅವರ ವಚನ ಸಾಹಿತ್ಯ ಸಂರಕ್ಷಣೆಯಿಂದ ವಚನ ಸಾಹಿತ್ಯ ಇಂದು ಜಾಗತಿಕ ಸಾಹಿತ್ಯವಾಗಿ ಪರಿಣಮಿಸಿದೆ. ಕನ್ನಡ ಹಾಗೂ ಲಿಂಗಾಯತ ಅಸ್ಮಿತೆ ಉಳಿಸಲು ಪಣ ತೊಟ್ಟು ಉಳಿಸಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಲಿಂಗಾಯತ ಅದೊಂದು ಸಂಸ್ಕೃತಿ. ಅದು ಜಾತಿಯಲ್ಲ. ವಚನ ಸಾಹಿತ್ಯ ಸಂರಕ್ಷಣೆಗೆ ಮನೆ ಮಾರಿದ ಹಳಕಟ್ಟಿ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನಿವೃತ್ತ ಪ್ರಾಧ್ಯಾಪಕ ಮಲಕನಗೌಡ ಪಾಟೀಲ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಸೊನ್ನದ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿದರು. ವಿನೋದ ಜನೆವೇರಿ ವಂದಿಸಿದರು.