ಕಲಬುರಗಿ : ಸಮಾಜದಲ್ಲಿ ಅನೇಕ ಜನರು ಎಲೆಮರೆಯ ಕಾಯಿಯಂತೆ ಸಾಧನೆ ಮಾಡಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹ ನೀಡಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿಕಲಚೇತನ ಸಾಧಕ ನಿತೀನ್ ಡಿ.ರಂಗದಾಳ ಅವರ ಸಾಧನೆಗೆ ಸರ್ಕಾರ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಮಹಾನಗರ ಪಾಲಿಕೆ ಉಪಮಹಾಪೌರ ಶಿವಾನಂದ ಪಿಸ್ತಿ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ಕೊಹಿನೂರ ಕಂಪ್ಯೂಟರ್ ತರಬೇತಿ ಕೇಂದ್ರದ ಸಭಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ರಂಗದಾಳ ಅವರಲ್ಲಿರುವ ಮನೋಸ್ಥೈರ್ಯ, ಸಾಹಸ, ನಿರ್ದಿಷ್ಟ ಗುರಿ, ಕಾಯಕ ಪ್ರಜ್ಞೆ ಅವರನ್ನು ಸಾಧನೆ ಮಾಡಲು ಪ್ರೇರಣೆ ನೀಡಿದೆ. ವಿಕಲಚೇತನರಾಗಿದ್ದು, ಸಾಮನ್ಯರನ್ನು ಮೀರಿಸುವ ಸಾಧನೆ ಮಾಡಿ, ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶೇಷಚೇತನ ಸಾಧಕ ನಿತೀನ್ ಡಿ.ರಂಗದಾಳ ಮಾತನಾಡಿ, ವ್ಯಕ್ತಿಗಳಲ್ಲಿ ಕೀಳರಿಮೆ ಇರಬಾರದು.ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ. ಕೋಳಿ ಸಾಕಾಣಿಕೆ ಕಡಿಮೆ ಖರ್ಚಿನಲ್ಲಿ, ಹೆಚ್ಚಿನ ಲಾಭಗಳಿಸಬಹುದಾಗಿದೆ. ಯುವಕರು ಸ್ವಯಂ ಉದ್ಯೋಗದತ್ತ ಚಿತ್ತಹರಿಸಬೇಕು. ಅದಕ್ಕೆ ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಗುರುರಾಜ ಮತ್ತಿಮುಡ, ಶಿವಕುಮಾರ ಬಾಳ್ಳಿ, ಪ್ರಮುಖರಾದ ದಶರಥ ರಂಗದಾಳ, ಎಚ್.ಬಿ.ಪಾಟೀಲ, ಡಾ.ಸತೀಶ್ ಟಿ.ಸಣಮನಿ, ರಾಜಶೇಖರ ಮರಡಿ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ನೀಲಕಂಠಯ್ಯ ಹಿರೇಮಠ, ವೀರೇಶ ಬೋಳಶೆಟ್ಟಿ ನರೋಣಾ, ಚಂದ್ರಶೇಖರ ಪಾಟೀಲ, ಅಮರನಾಥ ಶಿವಮೂರ್ತಿ, ಲಕ್ಷ್ಮೀಕಾಂತ ರಂಗದಾಳ, ಗುರುದೇವಪ್ಪ ರಾಮಶೆಟ್ಟಿ, ಡಾ.ಕಾಶಿನಾಥ ಲೋಕಂಡೆ, ಪೀರಪ್ಪ ಝಾಪುರ, ಎಸ್.ಬಿ.ಹರಿಕೃಷ್ಣ, ಅಭಯ ಪ್ರಕಾಶ, ಬಸವರಾಜ ಎಸ್. ಪುರಾಣೆ, ದತ್ತಾ ಕಟಾರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.