ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಸಭಾಂಗಣದಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾದ ಅಫ್ಸರ್ ಕೊಡ್ಲಿಪೇಟೆ ಮಾತನಾಡುತ್ತಾ ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ಉದಾತ್ತ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಿದರೆ ಗುಜರಾತಿನಲ್ಲಿ ಶೋಷಿತರು ಅಧಿಕಾರವನ್ನು ಹಿಡಿಯುವ ದಿನ ದೂರ ಇಲ್ಲ, ಗುಜರಾತಿನ ದ್ವೇಷ ರಾಜಕೀಯಕ್ಕೆ ಎಸ್ಡಿಪಿಐಯ ಭಯ ಮುಕ್ತ ಸ್ವಾತಂತ್ರ್ಯ – ಹಸಿವು ಮುಕ್ತ ಸ್ವಾತಂತ್ರ್ಯ ಎಂಬ ಘೋಷಣೆಯೇ ಉತ್ತರವಾಗಲಿದೆ ಆದ್ದರಿಂದ ತುಳಿತಕ್ಕೊಳಗಾದ ವರ್ಗವನ್ನು ಜಾತಿ ಮತ ಭೇದಗಳ ವ್ಯತ್ಯಾಸವಿಲ್ಲದೆ ಒಂದುಗೂಡಿಸುವ ಕೆಲಸ ನಮ್ಮಿಂದಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯರಾದ ನಿಝಾಮುದ್ದೀನ್ ದೆಹಲಿ, ಎಸ್ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಎಸ್ಡಿಪಿಐ ಗುಜರಾತ್ ರಾಜ್ಯ ಉಪಾಧ್ಯಕ್ಷರಾದ ಅಡ್ವೊಕೇಟ್ ಓವೈಸ್ ಮಲಿಕ್, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಗುಜರಾತ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಮೀದ್ ರವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಜಾಝ್ ಮಖಾಮೆವಾಲ ನೆರವೇರಿಸಿದರು.