ಬೆಂಗಳೂರು: ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಕ್ರಿಕೆಟ್ ಆಟದಲ್ಲಿ ನೋ ಬಾಲ್ ಗೆ ಔಟ್ ಆದದ್ದು ಬೇಜಾರಾಗಿದೆ.
ನೋ ಬಾಲ್ ಹಾಕಿದವರಿಗೂ ಒಳ್ಳೆಯದಾಗಲಿ ಎಂದು ತಮಗೆ ಅಡ್ಡಬಂದವರಿಗೂ ಒಳ್ಳೆಯದಾಗಲಿ ಎಂದು ಶಾಸಕ ರಾಜೂಗೌಡ ಅವರು ನಿಟ್ಟುಸಿರು ಬಿಟ್ಟರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡಿಸಲು ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಇತರ ಗಣ್ಯರೂ ಬಹಳಷ್ಟು ಜನ ಪ್ರಯತ್ನಪಟ್ಟಿದ್ದರು. ನನ್ನ ಬೆಂಬಲಿಗರು ಹಾಗೂ ಕ್ಷೇತ್ರದ ಜನರೂ ಸಚಿವನಾಗಲಿ ಎಂದು ಆಸೆ ಪಟ್ಟಿದ್ದರು. ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಬೇಜಾರೇನಿಲ್ಲ. ನಾನಿನ್ನೂ ಚಿಕ್ಕವನು ಮುಂದೆ ಸಾಕಷ್ಟು ಅವಕಾಶಗಳಿವೆ. ಮೂಲತಃ ನಾನು ಸ್ಪೋರ್ಟ್ಸ್ ಮ್ಯಾನ್. ಹೀಗಾಗಿ ಸೋಲು-ಗೆಲವು ಸಮಾನವಾಗಿ ಸ್ವೀಕರಿಸುವೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸಿಎಂ ಯಡಿಯೂರಪ್ಪನವರು ತಾಳ್ಮೆಯಿಂದ ಇರಲು ಹೇಳಿದ್ದಾರೆ. ಅವರ ಆದೇಶ ಪಾಲನೆ ಮಾಡುವೆ. ನಾನೊಬ್ನ ಪಕ್ಷದ ಶಿಸ್ತಿನ ಸಿಪಾಯಿ. ಈ ಮೊದಲೇ ಹೇಳಿದಂತೆ ಪಕ್ಷದ ಸೈನಿಕ. ಹೀಗಾಗಿ ಸಚಿವ ಸ್ಥಾನ ಸಿಗದಿರುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.