ಶರಣರು ವಿಭೂತಿ ಭಸ್ಮದಿಂದ ಲೀಲೆಗೈದವರು

0
35

ಮಹಾದಾಸೋಹಿ ಶರಣಬಸವರು ವಿಭೂತಿಯಂದ ಅನೇಕ ಕಷ್ಟಗಳನ್ನು ಹೋಗಲಾಡಿಸಿ ಲೀಲೆಗೈದಿದ್ದಾರೆ ಎಂದು ಶರಣಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಮರಿಯಮ್ಮ ಎಸ್. ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಶರಣಬಸವೇಶ್ವರ ಸಂಸ್ಥಾನದಲ್ಲಿ ಇಂದಿಗೂ ವಿಭೂತಿಗೆ ಪ್ರಥಮ ಆದ್ಯತೆ. ಬಂದ ಭಕ್ತರಿಗೆಲ್ಲ ವಿಭೂತಿ ಕೊಡುವ ಪರಿಪಾಠವಿದೆ. ಆ ವಿಭೂತಿಯಿಂದ ತಮಗೆ ಒಳ್ಳೆಯದಾಗುತ್ತದೆಂಬ ಭಾವನೆ ಭಕ್ತ ಸಮೂಹದಲ್ಲಿದೆ. ಚೆನ್ನಪ್ಪನೆಂಬುವನು ಶರಣರಲ್ಲಿಗೆ ಬಂದು ಅವರ ದರ್ಶನ ಮಾಡಿದಾಗ ವಿಭೂತಿಯ ಉಂಡಿಯೊಂದು ಆತನಿಗೆ ಕೊಡುತ್ತಾರೆ. ತಿಳಿಯದೆ ಅದನ್ನು ಹೊರಗೆ ಕಟ್ಟಿಯ ಬುಡಕ್ಕೆ ಇಟ್ಟು ಬಂದು ಪ್ರಸಾದ ಪಡೆಯಬೇಕೆಂದು ಪಂಕ್ತಿಯಲ್ಲಿ ಕೂಡಬೇಕೆನ್ನುತ್ತಾನೆ. ಅಷ್ಟರಲ್ಲಿ ಕೈಕಾಲು ಬಾಯಿಯೆಲ್ಲ ವಂಕಾಗಿ ನೆಲಕ್ಕೆ ಬೀಳುತ್ತಾನೆ. ಸುದ್ದಿ ತಿಳಿದ ಶರಣರು ತಾವೇ ಅಲ್ಲಿಗೆ ಬಂದು ವಿಭೂತಿ ಎಲ್ಲಿದೆ ಎಂದು ಕೇಳುತ್ತಾರೆ.

Contact Your\'s Advertisement; 9902492681

ಆಗ ಆತ ಹೊರಗೆ ಕೈ ಮಾಡಿ ತೋರಿಸುತ್ತಾನೆ. ಹಾಗೆ ಎತ್ತಿಕೊಂಡು ಇಟ್ಟ ಸ್ಥಳಕ್ಕೆ ತರುತ್ತಾರೆ. ಅದರ ಸಮೀಪದಲ್ಲಿ ನಾಗರಹಾವೊಂದು ಕುಳಿತಿರುತ್ತದೆ. ಅದು ಯಾರಿಗೂ ವಿಭೂತಿಯ ಸಮೀಪ ಬರುಗೊಡುತ್ತಿಲ್ಲ. ಶರಣರು ಕುಳಿತಲ್ಲಿಂದಲೇ ಕೈಯೆತ್ತಿದಾಗ ಸರ್ಪ ಸರಿದು ಹೋಗುತ್ತದೆ. ಅಲ್ಲಿ ಬಿದ್ದ ಭಸ್ಮವನ್ನು ಅವನ ಕೈಯೊಳಗಿಡುತ್ತಾರೆ. ತಕ್ಷಣವೇ ಎದ್ದು ಕೂಡುತ್ತಾನೆ.  ಕೈಕಾಲು ಮೊಂಡಾಗಿದ್ದ ವ್ಯಕ್ತಿಯೊಬ್ಬ ಶರಣರ ನಾಮ ಜಪಿಸುತ್ತಾ ಮಹಾಮನೆ ಕಡೆಗೆ ಹೊರಟ. ಜನ ಅವನನ್ನು ನೋಡಿ ಬಯ್ಯತೊಡಗಿದರು ಆದರೂ ’ ಯಪ್ಪಾ ಶರಣಾ’ ಎನ್ನುತ್ತಾ ಆತ ಕೈಕಾಲು ಎಳೆಯುತ್ತಾ ಹೊರಟ. ಮಹಾಮನೆಯ ದ್ವಾರಕ್ಕೆ ಬಂದು ಜೋರಾಗಿ ಧ್ವನಿ ತೆಗೆದು ಅಳಲು ಪ್ರಾರಂಭಿಸಿದ. ಶರಣರ ಬಂದು ಜನರಿಗೆ ’ ಆತ ಕಲ್ಲಲ್ಲ, ಕಸವಲ್ಲ, ಮನುಷ್ಯನಿದ್ದಾನೆ ಒಳಗಿನ ಕಣ್ಣಿನಿಂದ ನೋಡಿರಪ್ಪಾ’ ಎನ್ನುತ್ತಾ ಹಾಗೆ ಬಂದು ಆತನ ಮೈಗೆ ತಮ್ಮ ಕೈಯಾರೆ ಭಸ್ಮವನ್ನು ಹಚ್ಚುತ್ತಾರೆ. ಅವನು ಸರಿಯಾಗುತ್ತಾನೆ. ಜನರೆಲ್ಲ ’ ನೀನು ದೇವರಪ್ಪಾ, ನಿನಗಿಂತ ಬೇರೆ ದೇವರು ಬೇಕೆ’ ಎಂದು ಬಾಗಿ ನಮಸ್ಕರಿಸುತ್ತಾರೆ.

ಒಂದು ಸಲ ಮಾರಿ ಮಹಾರೋಗ ಊರೆಲ್ಲ ಹಬ್ಬಿದಾಗ ಅದರ ಶಮನಕ್ಕೆ ಜನರು ಮಾರಿ ಮುಂದೆ ಕುರಿ, ಕೋಳಿ ಬಲಿಕೊಡಬೇಕೆಂದು ಸಿದ್ದರಾಗುತ್ತಾರೆ. ಶರಣರಿಗೆ ಈ ವಿಷಯ ತಿಳಿದು ಅದನ್ನು ತಡೆಯಲು ಹೊರಟರು. ಕುರಿಯನ್ನು ಕಡಿಯಬೇಕೆನ್ನುವಷ್ಟರಲ್ಲಿಯೇ ಕುರಿ ಚೀರಲು ಪ್ರಾರಂಭಿಸುತ್ತದೆ. ಕುಳಿತಲ್ಲಿಯೇ ಶರಣರು ತಮ್ಮ ಕೈಗಳನ್ನು ಎತ್ತಲು ಆ ಕುರಿ ಬಿಡಿಸಿಕೊಂಡು ಓಡತೊಡಗಿತ್ತದೆ. ಅದು ಶರಣರಲ್ಲಿ ಬಂದು ಅವಿತು ನಿಂತುಕೊಳ್ಳುತ್ತದೆ. ಕಡಿಯಬೇಕೆನ್ನುವವನ ಕೈ ಹಾಗೆಯೇ ಮೇಲಕ್ಕೆ ನಿಂತಿದೆ. ಶರಣರು ಭಸ್ಮಕೊಟ್ಟು ಊರಿನ ಆಗಸಿ ಬಾಗಿಲಿಗೆ ಹಚ್ಚಿರಿ ಎಂದು ಹೇಳಿದಾಗ ಮಾರಿಬೇನೆ ಊರಿಂದ ಪಲಾಯನಗೊಳ್ಳುತ್ತದೆ.

ಒಬ್ಬ ಸಾಹುಕಾರನಿಗೆ ಸಾಹುಕಾರಕೀಯ ಅಮಲು ನೆತ್ತಿಗೇರಿತು. ಶರಣಬಸವರ ಕಾರ್ಯಗಳನ್ನು ಪ್ರಶ್ನಿಸುವಷ್ಟು ಅವನ ಸೊಕ್ಕು ಹೆಚ್ಚಾಗತೊಡಗಿತು. ಬರುಬರುತ್ತಾ ಸಾಹುಕಾರ ಎಲ್ಲವನ್ನು ಕಳೆದುಕೊಂಡು ನಿರ್ಗತಿಕನಾದ. ಈತ ಮಾಡಿದ ಪಾಪ ಮಕ್ಕಳಿಗೂ ತಗಲಿ ಎಲ್ಲರೂ ಭಿಕ್ಷೆ ಬೇಡುವ ಪಾಳಿ ಬಂದಿತು. ಗಂಜಿ ಗತಿಯಿಲ್ಲದೆ ಮರಮರನೆ ಮರಗುತ್ತಿರುವ ಸಾಹುಕಾರ ನೇರವಾಗಿ ಕಲಬುರಗಿಗೆ ಬಂದು ಶರಣರ ಪಾದವಿಡಿಯುತ್ತಾನೆ. ಶರಣರು ಭಸ್ಮವನ್ನು ಆತನ ಹಣೆಗಚ್ಚಿ ’ ಇದ್ದಾಗ ಕರೆದು ದಾಸೋಹ ಮಾಡಪ್ಪಾ’ ಎಂದು ಉಪದೇಶ ಮಾಡಿ ಕಳುಹಿಸುತ್ತಾರೆ. ಮುಂದೆ ಕಳೆದುಕೊಂಡಷ್ಟು ಪಡೆಯುತ್ತಾನೆ. ತಪ್ಪಿಯೂ ಅಹಂಕಾರ ಪಡದೆ ಕೊಟ್ಟುಂಡು ಬದುಕುತ್ತಾನೆ. ಹೀಗೆ ಶರಣರ ಲೀಲೆಗಳು ಎಷ್ಟು ಹೇಳಿದರೂ ಕಡಿಮೆ ಎಂದು ಹೇಳಿದರು.

ಸಹ ಪ್ರಾಧ್ಯಾಪಕಿ ಡಾ.ಮರಿಯಮ್ಮ ಎಸ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here