ಗೃಹ ಲಕ್ಷ್ಮೀ ಯೋಜನೆ ಚಾಲನೆ ಹಿನ್ನೆಲೆ: ಕಲಬುರಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

0
29

ಕಲಬುರಗಿ; ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದಾದ “ಗೃಹ ಲಕ್ಷ್ಮೀ” ಯೋಜನೆಗೆ ಆಗಸ್ಟ್ 30 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಅದರ ನೇರ ಪ್ರಸಾರದ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮವಾಗಿ ಸಂಘಟಿಸಬೇಕು. ಎಲ್ಲಿಯೂ ಶಿಷ್ಠಾಚಾರ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಶಿಷ್ಠಾಚಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ: ಬಿ.ಫೌಜಿಯಾ ತರನ್ನುಮ್

ಬುಧವಾರ ತಮ್ಮ ಕಚೇರಿಯಲ್ಲಿ “ಗೃಹ ಲಕ್ಷ್ಮೀ” ಕಾರ್ಯಕ್ರಮಕ್ಕೆ ಚಾಲನೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದ ಅವರು, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಸರ್ಕಾರದ ಪ್ರಮುಖ ಯೋಜನೆ ಇದಾಗಿದೆ. ಹೀಗಾಗಿ ಕಾರ್ಯಕ್ರಮ ಹಿಂದಿನ ದಿನವೇ ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಸ್ವಚ್ಛತಾ ವಾಹಿನಿ, ಡಂಗುರ ಮೂಲಕ ಪ್ರಚಾರಪಡಿಸಬೇಕು. ಆ.29ಕ್ಕೆ ಈ ಕುರಿತು ಡ್ರೈ ರನ್ ಸಹ ಆಯೋಜಿಸಬೇಕು ಎಂದರು.

Contact Your\'s Advertisement; 9902492681

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಮತ್ತು ಮುಂದಾಳತ್ವ ವಹಿಸಬೇಕು. ಇತರೆ ಎಲ್ಲಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಪರಸ್ಪರ ಸಮನ್ವಯತೆಯಿಂದ ಒಟ್ಟಾರೆ ಎಲ್ಲಿಯೂ ಲೋಪವಾಗದಂತೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಣೆವಾಗಬೇಕು ಎಂದರು.

ಕಾರ್ಯಕ್ರಮ ಸಂಘಟನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರತ್ತೇಕ ಸುತ್ತೋಲೆ ಕಳುಹಿಸಿದ್ದು, ಅದರಂತೆ ಕಾರ್ಯಕ್ರಮ ಆಯೋಜಿಸಬೇಕು.

ಶಾಲೆ ಮತ್ತು ಶಾಲೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಬಾರದೆಂಬ ಸ್ಪಷ್ಟ ನಿರ್ದೇಶನವಿದ್ದು, ಸಮುದಾಯ ಭವನ, ಕಲ್ಯಾಣ ಮಂಟಪ, ಚೌಟ್ರಿಯಲ್ಲಿ ಇಲ್ಲವೆ ಬಯಲು ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಟೆಂಟ್, ಕುಡಿಯುವ ನೀರು, ಲಘು ಉಪಹಾರ, ಆಸನ ವ್ಯವಸ್ಥೆ ಮಾಡಬೇಕು. ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಕಾರ್ಯಕ್ರಮಕ್ಕೆ ಪ್ರಮುಖವಾಗಿ ಇಂಟರೆನಟ್ ವ್ಯವಸ್ಥೆ ಮತ್ತು ತಾಂತ್ರಿಕ ಸಿಬ್ಬಂದಿ ಅಗತ್ಯವಿದ್ದು, ಮುಂಚಿತವಾಗಿ ಇದರ ಖಾತ್ರಿ ಮಾಡಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ ಮೈಸೂರಿನಲ್ಲಿ ಜರುಗುವ ಚಾಲನಾ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಬೇಕಾದ ಕಾರಣ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಸ್ಥಳಗಳಲ್ಲಿ ಎಲ್.ಇ.ಡಿ ವಾಲ್, ಸ್ಕ್ರೀನ್ ವ್ಯವಸ್ಥೆ, ಧ್ವನಿವರ್ಧಕ ಅಳವಡಿಸಬೇಕು. ಇದರ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ತಹಶೀಲ್ದಾರ, ತಾಲೂಕ ಪಂಚಾಯತ್, ಸಿ.ಡಿ.ಪಿ.ಓ ಅವರ ಮೇಲುಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ನೋಡಲ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಬೇಕು ಎಂದರು.

313 ಕಡೆ ನೇರ ಪ್ರಸಾರ ಕಾರ್ಯಕ್ರಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು. ಮಾತನಾಡಿ ಆಗಸ್ಟ್ 30 ರಂದು ಜಿಲ್ಲೆಯ 261 ಗ್ರಾಮ ಪಂಚಾಯತಿ ಕೇಂದ್ರಸ್ಥಾನದಲ್ಲಿ ಮತ್ತು ನಗರ-ಸ್ಥಳೀಯ ಸಂಸ್ಥೆಗಳ 52 ವಾರ್ಡ್ ಸೇರಿದಂತೆ ಒಟ್ಟು 313 ಕಡೆ ಗೃಹ ಲಕ್ಷ್ಮೀ ಚಾಲನಾ ಕಾರ್ಯಕ್ರಮ ನೇರ ಪ್ರಸಾರ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದೂವರೆಗೆ ಜಿಲ್ಲೆಯಲ್ಲಿ ನಿಗದಿತ ಗುರಿ 5,89,105 ಪೈಕಿ 4,67,228 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅಂದು ಜಿಲ್ಲೆಯ ನೊಂದಾಯಿತ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ 2,000 ರೂ. ಹಣ ವರ್ಗಾವಣೆ ಮಾಡಲು ಸಹ ಅನುದಾನ ಜಿಲ್ಲೆಗೆ ಬಿಡುಗಡೆಯಾಗಿದೆ. ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಪ್ರತಿ ಕಾರ್ಯಕ್ರಮ ಸ್ಥಳದಲ್ಲಿ ಓರ್ವ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತೆ ಮಮತಾ ಕುಮಾರಿ, ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತ ಪ್ರಕಾಶ ರಜಪುತ್ ತಾಲೂಕಿನ ತಹಶೀಲ್ದಾರರು, ಸಿ.ಡಿ.ಪಿ.ಓ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here