ವಾಡಿ: ಮಹಾಮಳೆಗೆ ಉಕ್ಕಿ ಹರಿದ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ಯಾದಗಿರಿ ಜಿಲ್ಲೆಯ ಚೆನ್ನೂರು ಗ್ರಾಮಕ್ಕೆ ಭೇಟಿ ನೀಡಿದ ಸಿಮೆಂಟ್ ನಗರಿ ವಾಡಿ ಪಟ್ಟಣದ ಸೇಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು, ಪ್ರವಾಹ ಸಂತ್ರಸ್ತರಿಗೆ ಸೊಳ್ಳೆ ಪರದೆ ಹಾಗೂ ಹೊದಿಕೆಗಳನ್ನು ವಿತರಿಸುವ ಮೂಲಕ ನೂರಾರು ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿದರು.
ಅಪಾರ ಪ್ರಮಾಣದ ನೀರು ನುಗ್ಗಿ ಚೆನ್ನೂರು ಮುಳುಗಿ ಜನರ ಕಣ್ಣೀರಿಗೆ ಕಾರಣವಾಗಿದ್ದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಸೆಲಿನ್ ಹಾಗೂ ಸಿಸ್ಟರ್ ತೆಕಲಾ ಮೇರಿ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪಟ್ಟಣದಲ್ಲಿ ಧನ ಸಂಗ್ರಹ ಕಾರ್ಯಕ್ಕೆ ಮುಂದಾದರು. ಬೀದಿಗಳಲ್ಲಿ ಹಣದ ಡಬ್ಬಿ ಹಿಡಿದು ಜನರಲ್ಲಿ ಮನವಿ ಮಾಡಿದರು. ಮಕ್ಕಳ ಕೋರಿಕೆಗೆ ಸ್ಪಂದಿಸಿದ ಸ್ಥಳೀಯರು ಪ್ರವಾಹ ಸಂತ್ರಸ್ತರಿಗಾಗಿ ವಿವಿಧ ರೀತಿಯ ಸಹಾಯ ನೀಡಿ ಬೆನ್ನುತಟ್ಟಿದ್ದರು. ಸಂಗ್ರಹವಾದ ವಸ್ತುಗಳನ್ನು ಮೂಟೆಕಟ್ಟಿದರು. ಆಮೆಯಾದ ಹಣದಲ್ಲಿ ನೂರಾರು ಕುಟುಂಬಗಳಿಗಾಗಿ ಸೊಳ್ಳೆ ಪರದೆಗಳನ್ನು ಖರೀದಿಸಿದರು. ಮಕ್ಕಳೊಂದಿಗೆ ಶಿಕ್ಷಕರೂ ಪ್ರವಾಹ ಪೀಡಿತ ಚೆನ್ನೂರ ಗ್ರಾಮಕ್ಕೆ ತೆರಳಿ ಮನೆ ಮನೆಗೂ ಪರದೆ ವಿತರಿಸುವ ಮೂಲಕ ಮಾನವೀಯತೆ ಮೆರೆದರು. ಶಾಲಾ ಮಕ್ಕಳ ಕಾರ್ಯವನ್ನು ಶ್ಲಾಘಿಸಿದ ಪ್ರವಾಹಪೀಡಿತರು, ಕೈ ಮುಗಿದು ಬೆನ್ನು ತಟ್ಟಿ ಬೀಳ್ಕೊಟ್ಟರು ಎಂದು ಶಿಕ್ಷಕ ಇಮಾನವೆಲ್ ತಿಳೀಸಿದ್ದಾರೆ.
ಸಿಸ್ಟರ್ ಜೆರ್ಸಾ, ಗೋಪಾಲ, ರವಿಕುಮಾರ, ವಿನೋದ ಸೇರಿದಂತೆ ವಿದ್ಯಾರ್ಥಿ, ವಿರ್ಥಿನಿಯರು ಪಾಲ್ಗೊಂಡಿದ್ದರು.