ಕಲಬುರಗಿ: ದೇಶ ವಿದೇಶದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕೊಡುತ್ತಿದ್ದ ಡಾ. ಅಬ್ದುಲ್ ಕಲಾಂ ಅವರು ಆಗಾಧವಾದ ಜ್ಞಾನ ಮತ್ತು ವಿಜ್ಞಾನ ಸಂಪತ್ತನ್ನು ಹೊಂದಿದ್ದರು ಎಂದು ವಿಜ್ಞಾನ ಉಪನ್ಯಾಸಕ ದೇವಿಂದ್ರ ವಿಶ್ವಕರ್ಮ ಹೇಳಿದರು.
ಅವರು ಪ್ರಶಿಕ್ಷಣಾರ್ಥಿಗಳಿಗೆ ಅಬ್ದುಲ್ ಕಲಾಂ ಕುರಿತು ವಿಶೇಷ ಸಂದೇಶವನ್ನು ಕಳುಹಿಸಿ, ಕಲಾಂ ಅವರು ಬಡ ಕುಟುಂಬದಲ್ಲಿ ಜನಿಸಿದರು. ವಿದ್ಯಾಭ್ಯಾಸಕ್ಕೆ ಬಹಳ ಕಷ್ಟ ಪಡಬೇಕಾಗಿತು. ಮನೆಮನೆಗೆ ಪತ್ರಿಕೆಗಳನ್ನು ಹಾಕುತ್ತಿದರು, ಬಾಲ್ಯದಲ್ಲಿ ಕಲಾಂ ಅವರು ಸಮುದ್ರ ದಡದಲ್ಲಿ ನಿಂತು ಹಕ್ಕಿಗಳ ಹಾರಾಟವನ್ನು ಗಮನಿಸಿ ಅವುಗಳಂತೆ ನಾನು ಆಗಸದಲ್ಲಿ ಹಾರಬೇಕೆಂಬ ಮನೋಭಿಲಾಷೆ ಹೊಂದಿದ್ದರು. ಹೀಗಾಗಿ ಬಾಲ್ಯದಿಂದಲೂ ಕಲಾಂ ಅವರಿಗೆ, ವಿಮಾನ ತಾಂತ್ರಿಕತೆಯಲ್ಲಿ ಅತೀವ ಆಸಕ್ತಿ. ಅಬ್ದುಲ್ ಕಲಾಂ ಕ್ಷಿಪಣಿ ತಾಂತ್ರಿಕ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡರು. ಕ್ಷಿಪಣಿಗಳ ಉಡಾವಣೆಗೆ ಬೇಕಾದ ವಾಹನಗಳನ್ನು ಸೃಷ್ಟಿಸಿದರು.
ತ್ರಿಶೂಲ್, ಪೃಥ್ವಿ, ಅಗ್ನಿ ನಾಗ, ಆಕಾಶ ಎಂಬ ಕ್ಷಿಪಣಿಗಳನ್ನು ಉಡಾಯಿಸಿದ್ದರು. ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ಭಾರತ ರತ್ನ ನೀಡಿ ಗೌರವಿಸಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಮಹತ್ತರವಾದ ಕನಸುಗಳನ್ನು ಕಾಣಬೇಕು. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿಜ್ಞಾನ ಉಪನ್ಯಾಸಕ ದೇವಿಂದ್ರ ವಿಶ್ವಕರ್ಮ ಹೇಳಿದರು.
ಅಬ್ದುಲ್ ಕಲಾಂ ಅವರ ಕುರಿತ ವಿಶೇಷ ಉಪನ್ಯಾಸವನ್ನು ಸಕ್ಕರೆಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.