ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರಿನ ಸೈಸೆಕ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ಕನ್ನಡ ಭವನದ ಆವರಣದಲ್ಲಿರುವ ಸಾಹಿತ್ಯ ಮಂಟಪದಲ್ಲಿ ರವಿವಾರ ಜರುಗಿದ ಸೈಬರ್ ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ಹೆಚ್. ದುಂಡಿರಾಜ್, ಎಂ.ಎಸ್.ನರಸಿಂಹಮೂರ್ತಿ, ವೈ.ವಿ.ಗುಂಡೂರಾವ್, ಬಸವರಾಜ ಮಹಾಮನಿ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮಾತನಾಡಿ, ಇಂದು ದಿನಾಲೂ ಹಲವಾರು ರೀತಿಯ ಹೊಸ ಹೊಸ ಪ್ರಕರಣಗಳು ಮತ್ತು ವಂಚನೆಗಳು ಬೆಳಕಿಗೆ ಬರುತ್ತಿರುವುದು ಅಘಾತಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಸೈಬರ್ ಅಪರಾಧಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪರಿಷತ್ತು ಜನಮುಖಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮನದುಂಬಿ ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಹೊಸ ಜನಾಂಗ ಸೈಬರ್ ಕ್ರೈಂ ಹಾಗೂ ಇನ್ನಿತರ ಮೋಸದ ಜಾಲಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದಿರಬೇಕಾದುದು ಅನಿವಾರ್ಯ ಇದೆ. ಇಂದು ಓದಿದವರೇ ಸೈಬರ್ ಕ್ರೈಂ ಗೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಸೈಬರ್ ಕ್ರೈಂ ಅನ್ನು ನಾವೆಲ್ಲರೂ ಸೇರಿ ತಡೆಗಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕೆಲಸದ ಜೊತೆಗೆ ಸಾಮಾಜಿಕ ಚಿಂತನೆ ಮೂಡಿಸುವ ಕೆಲಸವೂ ಸಹ ಮಾಡುತ್ತಿದೆ ಎಂದರು.
ಸೈಸೆಕ್ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕಿ ವನಜಾಕ್ಷಿ ಬಿ.ಹೆಚ್. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಧುರೀಣ ಮಲ್ಲಿನಾಥ ಪಾಟೀಲ ಕಾಳಗಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ವಿನೋದ ಜೇನವೇರಿ, ಪ್ರಭವ ಪಟ್ಟಣಕರ್, ಕಲ್ಯಾಣಕುಮಾರ ಶೀಲವಂತ, ಧರ್ಮಣ್ಣ ಹೆಚ್. ಧನ್ನಿ, ಡಾ. ಶರಣಪ್ಪ ಮಾಳಗಿ, ಡಾ. ಸದಾನಂದ ಪೆರ್ಲ, ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಪ್ರಹ್ಲಾದ ಭುರ್ಲಿ, ಶಕುಂತಲಾ ಪಾಟೀಲ, ಜಗದೀಶ ಮರಪಳ್ಳಿ, ಮಲ್ಲಿನಾಥ ದೇಶಮುಖ, ಗುಂಡಣ್ಣ ಡಿಗ್ಗಿ, ಸಾವಿತ್ರಿ ಸಲಗರ ಸೇರಿದಂತೆ ಇತರರಿದ್ದರು.
ಪ್ರಸಿದ್ಧ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ಹೆಚ್.ದುಂಡಿರಾಜ್, ಎಂ.ಎಸ್.ನರಸಿಂಹಮೂರ್ತಿ, ವೈ.ವಿ.ಗುಂಡೂರಾವ್, ಬಸವರಾಜ ಮಹಾಮನಿ ತಮ್ಮ ಹಾಸ್ಯ ಚಟಾಕೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಬದುಕಿನಲ್ಲಿ ಭರವಸೆ ಮುಡಿಸಿದರು.