ಹಳಕರ್ಟಿ ಘಟನೆ: ಆರೋಪಿ ರಕ್ಷಣೆ ಸಹಿಸಲ್ಲ
ವಾಡಿ: ಹಳಕರ್ಟಿ ಗ್ರಾಮದಲ್ಲಿ ಘಟಿಸಿದ ಬಸವೇಶ್ವರ ಭಾವಚಿತ್ರ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಯನ್ನು ರಕ್ಷಿಸಲು ಮುಂದಾದರೆ ಸಹಿಸುವುದಿಲ್ಲ ಎಂದು ಹಳಕರ್ಟಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಳಕರ್ಟಿ ಅಖಿಲ ಭಾರತ ವೀರಶೈವ ಲಿಂಗಾಯತ ಟ್ರಸ್ಟ್ ಗೌರವಾಧ್ಯಕ್ಷ ರಾಜುಗೌಡ ಪೊಲೀಸ್ ಪಾಟೀಲ ಹಾಗೂ ಮುಖಂಡ ನೀಲಕಂಠ ಸಾಹು ಸಂಗಶೆಟ್ಟಿ, ಪೊಲೀಸರ ತನಿಖಾ ನಡೆಯನ್ನೇ ಪ್ರಶ್ನಿಸಿದ್ದಾರೆ. ಬಂಧಿತ ಆರೋಪಿ ಶಹಾರೂಖ್ ಲಾಲಹ್ಮದ್ ತಾಳಿಕೋಟೆ, ಈ ಹಿಂದೆ ಗ್ರಾಮದಲ್ಲಿ ನಡೆದಿರುವ ಕೊಲೆ, ಕಳವು, ಗಲಾಟೆಗಳು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಗ್ರಾಮಸ್ಥರ ಅಶಾಂತಿಗೆ ಕಾರಣವಾಗಿದ್ದಾನೆ. ಈಗ ಬಸವೇಶ್ವರ ಭಾವಚಿತ್ರವನ್ನು ಸುಟ್ಟು ಇಡೀ ನಾಡಿನ ಬಸವಾಭೀಮಾನಿಗಳನ್ನು ಕೆರಳಿಸಿದ್ದಾನೆ. ಘಟನೆಯ ತನಿಖೆ ಪೂರ್ಣಗೊಳಿಸಿರುವ ಚಿತ್ತಾಪುರ ಪೊಲೀಸರು, ಈತ ಮದ್ಯ ಸೇವನೆ ಜತೆಗೆ ಗಾಂಜಾ ಮತ್ತು ಡ್ರಗ್ಸ್ ವ್ಯಸನಿಯಾಗಿದ್ದಾನೆ ಎಂದು ಹೇಳುವ ಮೂಲಕ ಆರೋಪಿಯನ್ನು ಕಾನೂನು ಶಿಕ್ಷೆಯಿಂದ ಬಚಾವ್ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಹಳಕರ್ಟಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬೇಧವಿಲ್ಲದೆ ಸಹೋದರರಂತೆ ಬಾಳುತ್ತಿದ್ದೇವೆ. ಪ್ರತಿ ಹಬ್ಬ ಹರಿದಿನಗಳಲ್ಲಿ ಕೋಮು ಸೌಹಾರ್ಧತೆ ಕಾಪಾಡಿಕೊಂಡು ಬಂದಿದ್ದೇವೆ. ಪ್ರಕರಣದ ಆರೋಪಿ ಶಹಾರುಖ್ ಕುಟುಂಬ ಹೊರೆತುಪಡಿಸಿ ಉಳಿದೆಲ್ಲಾ ಮುಸ್ಲಿಂ ಕುಟುಂಬಗಳು ನಮ್ಮೊಂದಿಗೆ ಆತ್ಮೀಯತೆ ಕಾಪಾಡಿಕೊಂಡಿದ್ದಾರೆ. ತಾಳಿಕೋಟೆ ಕುಟುಂಬ ಮಾತ್ರ ಗ್ರಾಮದಲ್ಲಿ ಕಿಡಿಗೇಡಿತನ ಮೆರೆಯುವ ಮೂಲಕ ಪದೇಪದೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದೆ. ಇದು ಮುಸ್ಲಿಂ ಸಮುದಾಯಕ್ಕೂ ತಲೆನೋವಾಗಿದೆ.
ಹಣದ ಧರ್ಪದಿಂದ ಈ ಕುಟುಂಬ ಸದಸ್ಯರು ಎಲ್ಲಾ ಅಪರಾಧಗಳಿಂದಲೂ ಪಾರಾಗುತ್ತಿದ್ದಾರೆ. ಜೀವ ಬೆದರಿಕೆಯೊಡ್ಡಿ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿಡುವ ಕಲೆ ಈ ಶಹಾರುಖ್ ಕುಟುಂಬ ಸದಸ್ಯರಿಗೆ ಕರಗತವಾಗಿದೆ. ಹೀಗಾಗಿ ಇವರಿಂದ ಅನೇಕರು ಜೀವ ಭಯ ಎದುರಿಸುತ್ತಿದ್ದಾರೆ. ಬಸವೇಶ್ವರ ಭಾವಚಿತ್ರ ಅಪಮಾನ ಪ್ರಕರಣದಲ್ಲೂ ನಮಗೇನೂ ಆಗಲ್ಲ ಎಂಬ ಅಹಂಕಾರದ ಮಾತುಗಳನ್ನು ಗ್ರಾಮದಲ್ಲಿ ಹರಿಬಿಟ್ಟಿದ್ದಾರೆ.
ಯಾವ ನಮ್ಮ ವಿರುದ್ಧ ನಿಲ್ಲುತ್ತಾನೆ ನೋಡುತ್ತೇವೆ ಎಂಬ ಬೆದರಿಕೆ ಕರೆಗಳು ಕೆಲವರಿಗೆ ಬಂದಿವೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದೆ. ಪೊಲೀಸರು ಆರೋಪಿ ಮದ್ಯಪಾನ ಮಾಡಿದ್ದ, ಗಾಂಜಾ ಮತ್ತು ಡ್ರಗ್ಸ್ ಸೇವಿಸಿದ್ದ. ಮತ್ತಿನಲ್ಲಿ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾನೆ ಎಂದು ವಾದಿಸಿ ಆರೋಪಿಯ ರಕ್ಷಣೆಗೆ ನಿಂತರೆ ಪರಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.
ಮತ್ತಷ್ಟು ಸಮಾಜಘಾತುಕ ಪ್ರಕರಣಗಳು ಈ ಶಹಾರುಖ್‍ನಿಂದ ಸಂಭವಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮುನ್ನೆಚ್ಚರಿಕೆ ನೀಡಿರುವ ಮುಖಂಡರು, ಆರೋಪಿ ಶಹಾರುಖ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಗ್ರಾಮದಲ್ಲಿ ಪದೇಪದೆ ಅಶಾಂತಿಗೆ ಕಾರಣವಾಗುತ್ತಿರುವ ಆತನ ಕುಟುಂಬವನ್ನು ಸ್ಥಳಾಂತರಿಸಬೇಕು ಅಥವ ಶಹಾರುಖ್‍ನನ್ನು ಊರಿಗೆ ಕಾಲಿಡದಂತೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವೀರಶೈವ ಸಮಾಜದ ವಾಡಿ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಹಳಕರ್ಟಿ ವೀರಶೈವ ಸಮಾಜದ ಕಾರ್ಯದರ್ಶಿ ಶಿವಶರಣಪ್ಪ ಹೂಗಾರ, ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಕಾಂತ ಮೇಲಿನಮನಿ, ಮುಖಂಡರಾದ ವೀರಣ್ಣ ಯಾರಿ, ರವಿ ಸಿಂಧಗಿ, ವೀರೇಶ ಕಪೂರ, ಸಿದ್ರಾಮ ಪೂಜಾರಿ, ಸುರೇಶ ಸಂಗಶೆಟ್ಟಿ, ವೀರೇಶ ಜೀವಣಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.