ನ.1ರೊಳಗೆ ಕನ್ನಡ ನಾಮಫಲಕ ಪ್ರಧಾನವಾಗಿರಲಿ: ಗಜೇಂದ್ರ ಎಚ್ಚರಿಕೆ

0
60

ಆನೇಕಲ್: ತಾಲ್ಲೂಕು ವ್ಯಾಪ್ತಿಯಲ್ಲಿರುವ ಮಾಲ್ ಗಳು ಸೇರಿದಂತೆ ಅಂಗಡಿ ಮುಗ್ಗಟ್ಟುಗಳಲ್ಲಿ ನವೆಂಬರ್ ಒಂದರೊಳಗೆ ಕನ್ನಡ ನಾಮ ಫಲಕವನ್ನು ಪ್ರಧಾನವಾಗಿ ಅಳವಡಿಸಬೇಕು. ಇಲ್ಲದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರ ನೇತೃತ್ವದಲ್ಲಿ ದಾಳಿ ನಡೆಸಬೇಕಾದೀತು ಎಂದು ಕರವೇ ಆನೇಕಲ್ ಆಧ್ಯಕ್ಷ ಗಜೇಂದ್ರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಕನ್ನಡ ಭಾಷೆ ದಿನೇ ದಿನೇ ಕ್ಷೀಣಿಸುತ್ತಿದೆ. ಇಲ್ಲಿನ ನೆಲ, ಜಲ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಉದ್ದಿಮೆದಾರರು, ಕನ್ನಡ ನಾಡು-ನುಡಿಯ ಬಗ್ಗೆ ನಿರಾಸಕ್ತಿ ತಾಳಿದ್ದಾರೆ. ಇಂತಹ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದೆ ಹೋದರೆ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ಆದರೆ, ಕರ್ನಾಟಕ ನೆಲದಲ್ಲಿ ಕನ್ನಡ ಭಾಷೆ ರಾರಾಜಿಸಬೇಕೆಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಹೆಬ್ಬಯಕೆ. ಹೀಗಾಗಿ ಮಾಲ್ ಗಳು ಸೇರಿದಂತೆ ಎಲ್ಲ ರೀತಿಯ ಅಂಗಡಿ ಮುಗ್ಗಟ್ಟುಗಳ ಮಾಲೀಕರು ಕರವೇ ಜೊತೆ ನಾಡು, ನುಡಿಯ ಬೆಳವಣಿಗೆಗೆ ಕೈ ಜೋಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ವಾಣಿಜ್ಯ ಮಳಿಗೆಗಳ ನಾಮ ಫಲಕದಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿರಬೇಕೆಂಬುದು ನಿಯಮವಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕಾದದ್ದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಸ್ಥಳೀಯ ಆಡಳಿತಾಧಿಕಾರಿಗಳು ತಮ್ಮ ಉದಾಸೀನತೆಯನ್ನು ಬಿಟ್ಟು ಕನ್ನಡ ನಾಮ ಫಲಕ ಹಾಕದ ವಾಣಿಜ್ಯ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕನ್ನಡ ನಾಮಫಲಕಗಳನ್ನು ಅಳವಡಿಸುವುದರ ಜೊತೆ ಜೊತೆಗೆ ಕನ್ನಡಿಗರಿಗೆ ಉದ್ಯೋಗವಕಾಶವನ್ನು ಕಲ್ಪಿಸಬೇಕು. ಕೇವಲ ಭದ್ರತೆ ಹಾಗೂ ಕಸ ಗುಡಿಸುವುದಕ್ಕೆ ಸೀಮಿತಗೊಳಿಸದೆ, ಉನ್ನತ ಹುದ್ದೆಗಳಲ್ಲಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ, ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರ ನೇತೃತ್ವದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here