ಯಾದಗಿರಿ: ಗಣೇಶ ವಿಸರ್ಜನೆಗೆ ನಗರದ ಎರಡು ಕೆರಗಳ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ವಿಸರ್ಜನಾ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಈಗಾಗಲೇ ಕಳೆದ ವರ್ಷ ಒಂದು ಬಲಿಯನ್ನು ಪಡೆದಿದ್ದರೂ ಈ ಬಾರಿಯೂ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಹಿಂದು ಸಾಮ್ರಾಟ್ ಶಿವಾಜಿ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಪರಶುರಾಮ್ ಶೇಗುರಕರ್ ಆಗ್ರಹಿಸಿದ್ದಾರೆ.
ಜಿಲ್ಲೆಯಾದ್ಯಂತ ಗಣೇಶ ಚತುರ್ಥಿಗೆ ಸಂಭ್ರಮದಿಂದ ಸಿದ್ದತೆಗಳು ನಡೆಯುತ್ತಿದ್ದರೂ ನಗರದಲ್ಲಿ ವಿಸರ್ಜನಾ ಹೊಂಡಗಳ ನಿರ್ವಹಣೆಯಲ್ಲಿ ಸಂಪೂರ್ಣ ಎಡವಿದೆ ಎಂದು ಆರೋಪಿಸಿದ್ದಾರೆ. ತಕ್ಷಣ ದೊಡ್ಡ ಹಾಗೂ ಸಣ್ಣ ಕೆರೆಯ ಬಳಿ ನಿರ್ಮಿಸಿದ ಹೊಂಡಗಳಿಗೆ ಸೂಕ್ತ ಭದ್ರತೆಯ ಆವರಣ ಗೋಡೆ ಇಲ್ಲವೇ ಕಬ್ಬಿಣದ ರಕ್ಷಣಾ ಕವಚ ನಿರ್ಮಿಸಬೇಕಿತ್ತು. ಈ ಬಗ್ಗೆ ಈಗಾಗಲೇ ಕಳೆದ ಹಲವು ವರ್ಷಗಳಿಂದ ಆಗ್ರಹಿಸುತ್ತೇ ಬರುತ್ತಿದ್ದರೂ ಇದುವರೆಗೆ ಆಡಳಿತ ಮಾತ್ರ ಈ ಬಗ್ಗೆ ಲಕ್ಷ್ಯ ವಹಿಸದೇ ಇರುವುದರಿಂದ ಜೀವ ಹಾನಿಯೂ ಆಗಿರುವುದು ನಡೆದಿವೆ. ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ನಿಷೇಧ ಕಟ್ಟು ನಿಟ್ಟು ಜಾರಿಗೊಳಿಸಿ: ಗಣೇಶ ಚತುರ್ಥಿಗೆ ಪಿಓಪಿ ಗಣೇಶ ಮಾರಾಟ ನಿಷೇಧವಿದ್ದರೂ ಜಿಲ್ಲೆಯಲ್ಲಿ ಇನ್ನು ಜಾಗೃತಿ ಮೂಡಿಲ್ಲದಿರುವುದರಿಂದ ತಕ್ಷಣ ಪೊಲೀಸರಿಗೆ ಹಾಗೂ ಇನ್ನಿತರ ಅಧಿಕಾರಿಗಳಿಗೆ ವಿಶೇಷ ಅದೇಶ ನೀಡುವ ಮೂಲಕ ಅಕ್ರಮ ಮಾರಾಟಗಾರರ ಮೇಲೆ ದಾಳಿ ನಡೆಸಿ ಪಿಓಪಿ ಮೂರ್ತಿಗಳ ವಶಕ್ಕೆ ಪಡೆಯಲು ತತಕ್ಷಣದ ನಿರ್ದೇಶನ ನೀಡಬೇಕೆಂದು ವೆಂಕಟೇಶ ಭೀಮನಳ್ಳಿ, ಲಕ್ಷ್ಮಣ ತೆಲುಗುರು, ರಾಘು ಚಿಂತನಳ್ಳಿ, ವಿಶ್ವನಾಥ ಬಾಡದ, ಅಂಬ್ರೇಷ್, ಶಂಕರ, ಅಂಬರೇಶ ಹಿರೇಮಠ, ನರೇಶ ಅವರು ಆಗ್ರಹಿಸಿದ್ದಾರೆ.