ಕಲಬುರಗಿ; ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆಗಳ ಕ್ಷೀಪ್ರ ಸರ್ವೇಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ವಿಜ್ಞಾನಿಗಳನ್ನೊಳಗೊಂಡು ಕೃಷಿ ಇಲಾಖೆ, ಅಧಿಕಾರಿಗಳೊಂದಿಗೆ ಆರು ತಂಡಗಳಲ್ಲಿ ಜಿಲ್ಲೆಯಾದ್ಯಂತ ವಿವಿಧ ಬೆಳೆಗಳ ತಾಕುಗಳಿಗೆ ಭೇಟ್ಟಿ ನೀಡಿಲಾಯಿತು.
ಮುಂಗಾರು ಹಂಗಾಮಿನ ತೊಗೆರಿ, ಹತ್ತಿ, ಕಬ್ಬು ಹಾಗೂ ಹಿಂಗಾರು ಹಂಗಾಮಿನ ಕಡಲೆ, ಜೋಳ, ಮೆಣಸಿನಕಾಯಿ ಬೆಳೆಗಳ ಬೆಳವಣಿಗೆ, ಅವುಗಳಲ್ಲಿರುವ ಪೀಡೆಗಳ ಬಾಧೆಗಳನ್ನು ಹಾಗೂ ಇತರೆ ಅವಶ್ಯಕವಿರುವ ಮಾಹಿತಿಗಳನ್ನು ತಿಳಿದಕೊಂಡು ರೈತರಿಗೆ ಅವುಗಳ ನಿರ್ವಹಣಾ ಕ್ರಮಗಳನ್ನು ತಿಳಿಸಲಾಯಿತು.
ಜಿಲ್ಲೆಯಾದ್ಯಂತ ತೊಗರಿ ಬೆಳೆಯು ಶೇ 90 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹೂವಾಡುವ ಹಂತದಲ್ಲಿದ್ದು ಅಲ್ಲಲ್ಲಿ ಕಾಯಿ ಕಟ್ಟುತ್ತಿರುವದನ್ನು ಸಹ ಗಮನಿಸಲಾಗಿದೆ. ಜೂನ ತಿಂಗಳಲ್ಲಿ ಬಿತ್ತನೆಯಾದ ಬೆಳೆಯು ಕಾಯಿ ಕಟ್ಟುವ ಹಂತದಲ್ಲಿದೆ. ಜುಲೈ ಹಾಗೂ ಅಗಷ್ಟ ಮೊದಲ ವಾರದಲ್ಲಿ ಬಿತ್ತನೆಯಾದ ಬೆಳೆಯು ಹೂವಾಡುವ ಹಂತದಲ್ಲಿದೆ. ಬೆಳೆಯಲ್ಲಿ ಕೀಟಗಳ ಬಾಧೆ ಕಡಿಮೆ ಇದ್ದು ಬಹಿತೇಕ ರೈತರು ಜೇಡ ಕಟ್ಟುವ ಕೀಟ ಹಾಗೂ ಕಾಯಿ ಕೊರಕದ ತತ್ತಿ ಹಾಗೂ ಮರಿಗಳ ನಿರ್ವಹಣೆಗೆ ಕೀಟನಾಶಕಗಳನ್ನು ಬಳಸಿರುವದರಿಂದ ಬೆಳೆಯಲ್ಲಿ ಕೀಟದ ಬಾಧೆ ಆರ್ಥಿಕ ನಷ್ಟಕ್ಕಿಂತ ಕಡಿಮೆ ಇರುತ್ತದೆ. ಒಣ ಬೇಸಾಯದಲ್ಲಿ ಬಿತ್ತನೆಯಾದ ಬೆಳೆಗಳ ಬೆಳವಣಿಗೆ ಮಳೆಯ ಕೊರತೆಇಂದ ಕುಬ್ಜವಾಗಿದ್ದರೂ ಸಹ ಬೆಳೆ ಹೂವಾಡುವ ಹಂತದಲ್ಲಿದೆ. ಕಳೆದ 10 ದಿನಗಳ ಹಿಂದೆ ಮಳೆಯಾಗಿರುವ ಹಿನ್ನಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ತೊಗರಿ ಹತ್ತಿ ಹಾಗೂ ಇತರೆ ಬೆಳೆಗಳಲ್ಲಿ ಚೇತರಿಕೆ ಕಂಡುಬಂದಿದೆ.
ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆದ ತೊಗರಿಯಲ್ಲಿ ಮ್ಯಾಕ್ರೋಫೊಮಿನ ಕಾಂಡ ಮಚ್ಚೆ ರೋಗದ ಲಕ್ಷಣಗಳು ಕಂಡುಬಂದಿರುತ್ತವೆ. ಬಾಧಿತ ಹೊಲಗಳಲ್ಲಿ ಶೇ. 2 ರಿಂದ 3ರಷ್ಟು ಗಿಡಗಳು ನೆಟೆ ಹೊಗುತ್ತಿರವದನ್ನು ಗಮನಿಸಲಾಗಿದೆ. ಈ ರೋಗದ ನಿರ್ವಹಣೆಗೆ ಗಿಡದ ಕಾಂಡಕ್ಕೆ ಕಾರ್ಬೇಂಡೆಜಿಮ್ ಮತ್ತು ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ ನೀರಿಗೆ 3ಗ್ರಾಂ ಅಥವಾ ಕಾರ್ಬೇಂಡೆಜಿಮ್ 1ಗ್ರಾಂ ದಂತೆ ಬೆರಸಿ ಸಿಂಪರಣೆ ಮಾಡಲು ತಿಳಿಸಲಾಗಿದೆ.
ನೀರಾವರಿಯಲ್ಲಿ ಬೆಳೆದ ತೊಗರಿಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಹೂವುಗಳು ಉದುರುತ್ತಿರುವದಾಗಿ ರೈತರು ತಿಳಿಸಿರುತ್ತಾರೆ. ನೀರಾವರಿ ಕ್ಷೇತ್ರಗಳಲ್ಲಿ ಮಳೆಯಿಂದಾಗಿ ಹಾಗೂ ಸುತ್ತ ಮುತ್ತ ಇತರೆ ನೀರಾವರಿ ಬೆಳೆಗಳು ಇರುವದರಿಂದ ವಾತಾವರಣದಲ್ಲಿ ಹೆಚ್ಚಿನ ಆದ್ರತೆ ಇರುವದರಿಂದ ಅಲ್ಟರನೇರಿಯ ಎಲೆ ಚುಕ್ಕೆ ರೋಗದ ಲಕ್ಷಣಗಳು ಗಿಡದ ಎಲೆಗಳು, ಕಾಂಡ, ಮೊಗ್ಗು, ಹೂವು ಹಾಗೂ ಕಾಯಿಗಳ ಮೇಲೆ ಕಂಡು ಬಂದಿದ್ದು ಬಾಧೆಯಿಂದಾಗಿ ಕಾಯಿ ಮತ್ತು ಹೂವುಗಳು ಉದುರುತ್ತಿವೆ. ರೋಗದ ನಿರ್ವಹಣೆಗೆ ಕಾರ್ಬೇಂಡೆಜಿಮ್ ಮತ್ತು ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ ನೀರಿಗೆ 3ಗ್ರಾಂ ಅಥವಾ ಕಾರ್ಬೇಂಡೆಜಿಮ್ 1ಗ್ರಾಂ ಅಥವಾ ಹೆಕ್ಸಾಕೊನಾಜೊಲ 1 ಮಿಲಿ/ಲೀ ನಿರಿಗೆ ಬೆರಸಿ ಸಿಂಪರಣೆ ಮಾಡಲು ತಿಳಿಸಲಾಗಿದೆ.
ಇವುಗಳೊಂದಿಗೆ ಲಘು ಪೊಶಕಾಂಶಗಳಾದ ಪಲ್ಸ ಮ್ಯಾಜಿಕ್ 10ಗ್ರಾಂ/ ಲೀ ನೀರಿಗೆ ಮತ್ತು 19:19:19 ರಸಾವರಿ ಗೊಬ್ಬರವನ್ನು 5ಗ್ರಾಂ/ ಲೀ ನೀರಿಗೆ ಬೆರಸಿ ಸಿಂಪರಣೆ ಮಾಡಿದ್ದಲ್ಲಿ ಹೊಸ ಚಿಗುರು ಹಾಗೂ ಹುವುಗಳು ಬರುವದರಿಂದ ಬೆಳೆಯಲ್ಲಿಯ ಹಾನಿಯನ್ನು ಕಡಿಮೆ ಮಾಡಬಹುದು.
ಕಾಯಿ ಕೊರಕದ ಕೀಟದ ಬಾಧೆ ಕಂಡುಬಂದಲ್ಲಿ ಫ್ಲೂಬೆಂಡಮೈಡ್ 02ಗ್ರಾಂ/ಲೀ ನೀರಿಗೆ ಅಥವಾ ಇಂಡಾಕ್ಸಿಕಾಬ್ 0.3 ಮಿಲಿ/ಲೀ ನೀರಿಗೆ ಅಥವಾ ಇಮಾಮೆಕ್ಟಿನ್ ಬೆಂಜೋಯೆಟ 0.3ಗ್ರಾಂ/ಲೀ ನೀರಿಗೆ ಬೆರಸಿ ಸಿಂಪರಣೆ ಮಾಡುವದರಿಂದ ಬೆಳೆಯಲ್ಲಿಯ ಕೀಟಗಳ ನಿರ್ವಹಣೆ ಮಾಡಬಹುದು. ರೈತರು ಪ್ರತಿ ಎಕರೆಗೆ 200 ಲೀಟರ ಸಿಂಪರಣಾ ದ್ರಾವಣವನ್ನು ಬಳಸುವದು ಅತ್ಯವಶ್ಯಕ. ಸಿಂಪರಣೆ ಮಾಡುವಾಗ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವದು ಅತ್ಯವಶ್ಯಕ.
ಹತ್ತಿ ಬೆಳೆಯು ಕಾಯಿ ಒಡೆಯುವ ಹಂತದಲ್ಲಿದೆ. ಕೆಲವಡೆ ಇನ್ನು ಕಾಯಿಗಳು ಇದ್ದು ಬೆಳೆಯಲ್ಲಿ ರಸ ಹೀರುವ ಕೀಟಗಳ ಬಾಧೆ ಕಂಡುಬಂದಿರುತ್ತದೆ. ಅವುಗಳ ನಿರ್ವಹಣೆಗೆ ಅಂತರವ್ಯಾಪಿ ಕೀಟನಾಶಗಳಾದ 0.7 ಗ್ರಾಂ ಬೂಪ್ರೊಫೆಜಿನ್ ಅಥವಾ 0.3ಗ್ರಾಂ ಪ್ಲೋನಿಕ್ ಅಮೈಡ್ ಅಥವಾ 0.3ಗ್ರಾಂ ಡೈನ್ಯುಟೆಫೂರಾನ್ ಅಥವಾ 1.0 ಮಿ.ಲಿ ಅಸಿಟಾಮಿಪ್ರಿಡ್ ಅಥವಾ 2.0 ಮಿ.ಲಿ ಡೈಮಿಥೋಯೇಟ್ ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪರಣೆ ಮಾಡಬಹುದಾಗಿದೆ ಮತ್ತು 19:19:19 ರಸಾವರಿ ಗೊಬ್ಬರವನ್ನು ಸಿಂಪರಣೆ ಮಾಡುವದರಿಂದ ಬೆಳೆ ಚನ್ನಾಗಿ ಬೆಳೆಯುವದು.
ಕಡಲೆ ಬೆಳೆಯು ಬಿತ್ತನೆಯಾಗಿ ಸುಮಾರು 15 ದಿನಗಳಿಂದ 30 ದಿನಗಳ ಬೆಳೆಯಾಗಿದೆ ಅದರಲ್ಲಿ ಅಲ್ಲಲ್ಲಿ ಗಿಡಗಳು ಕಾಂಡ ಕೊಳೆ ರೋಗದಿಂದ ಸಾಯುತ್ತಿರುವದು ಕಂಡುಬಂದಿದ್ದು ಪ್ರತಿ ಲೀಟರ ನೀರಿಗೆ 5.0 ಗ್ರಾಂ ಟ್ರೈಕೊಡರ್ಮ ಬೆರಸಿ ಗಿಡಗಳ ಬೇರುಗಳಿಗೆ ತೋಯಿಸುವದರಿಂದ (ಡ್ರೇಂಚಿಂಗ್) ಸಸಿಗಳನ್ನು ಸಂರಕ್ಷಿಸಬಹುದಾಗಿದೆ.
ಜೋಳದಲ್ಲಿ ಕೆಲವಡೆ ಸೈನಿಕ ಹುಳದ ಬಾಧೆ ಕಂಡುಬಂದಿದ್ದು ಕೀಟದ ನಿರ್ವಹಣೆಗೆ ಇಮಾಮೆಕ್ಟಿನ್ ಬೆಂಜೆಯೋಟ್ ಕೀಟನಾಶಕವನ್ನು ಪ್ರತೀ ಲೀಟರ ನೀರಿಗೆ 0.5 ಗ್ರಾಂ ಬೆರಸಿ ಸಿಂಪರಣಾ ದ್ರಾವಣವು ಸುಳಿಯಲ್ಲಿ ಹೋಗವ ಹಾಗೆ ಸಿಂಪರಣೆ ಮಾಡುವದರಿಂದ ಕೀಟವನ್ನು ನಿಯಂತ್ರಿಸಬಹುದು.
ಈರುಳ್ಳಿಯಲ್ಲಿ ಎಲೆಗಳ ತುದಿ ಒಣಗುವದು ಹಾಗೂ ಬುಡಕೊಳೆಯ ರೋಗದ ಬಾಧೆಯನ್ನು ಗಮನಿಸಲಾಗಿದೆ. ರೋಗದ ನಿರ್ವಹಣೆಗೆ 5ಗ್ರಾಂ ಟ್ರೈಕೊಡರ್ಮ ಬೆರಸಿ ಗಿಡಗಳ ಬೇರುಗಳಿಗೆ ತೋಯಿಸುವದರಿಂದ (ಡ್ರೇಂಚಿಂಗ್) ಸಸಿಗಳನ್ನು ಸಂರಕ್ಷಿಸಬಹುದಾಗಿದೆ. ಇದೇ ದ್ರಾವಣ ವನ್ನು ಬೆಳೆಗೆ ಸಿಂಪರಣೆ ಮಾಡುವದರಿಂದ ರೋಗ ಮುಕ್ತ ಬೆಳೆಯನ್ನು ಬೆಳೆಯಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.