ವಾಡಿ: ಪಟ್ಟಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಕೂಡಲೆ ಅದನ್ನು ತಡೆಯುವ ಮೂಲಕ ಪ್ರಕೃತಿ ಸಂಪತ್ತು ಲೂಟಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ) ಜಿಲ್ಲಾ ಸಂಚಾಲಕ ಸತೀಶ ಭಟ್ಟರ್ಕಿ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಸತೀಶ ಭಟ್ಟರ್ಕಿ, ಚಿತ್ತಾಪುರ ತಾಲೂಕಿನಲ್ಲಿ ತಲೆ ಎತ್ತಿರುವ ಗಣಿ ಮಾಫಿಯಾ ಜಾಲವನ್ನು ಬೇಧಿಸಿ ಜೈಲಿಗಟ್ಟಬೇಕು ಎಂದು ಕೋರಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಪುರಸಭೆ ವ್ಯಾಪ್ತಿಯ ಭಾರತ ಕ್ವಾರಿ (ವಾರ್ಡ್ 23) ಬಡಾವಣೆ ಹತ್ತಿರ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.
ಪರವಾನಿಗೆ ಪಡೆಯದೆ ಗಣಿಗಾರಿಕೆಯಲ್ಲಿ ತೊಡಗಿರುವವರು ರಾಜಕೀಯ ಪ್ರಭಾವಿಗಳಾಗಿದ್ದಾರೆ. ಇವರು ನಡೆಸುತ್ತಿರುವ ಗಣಿಗಾರಿಕೆಯಿಂದ ಭಾರತ್ ಕ್ವಾರಿ ಬಡಾವಣೆಯ ರಸ್ತೆಗಳನ್ನು ನುಂಗಿ ಹಾಕುತ್ತಿದೆ. ರಸ್ತೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದರೂ ರಸ್ತೆ ನಿರ್ಮಿಸಲು ಗಣಿಧಣಿಗಳು ಬಿಡುತ್ತಿಲ್ಲ. ಇದರಿಂದ ವಾಸಿಸುವ ಜನರಿಗೆ ಸಾರಿಗೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಂದ್ರಾ ನಗರ, ಭಾರತ್ ಕ್ವಾರಿ ಹಾಗೂ ಲಕ್ಷ್ಮೀಪುರವಾಡಿ ಜನರು ಅಕ್ರಮ ಕಲ್ಲು ಗಣಿಗಾರಿಕೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಡೆದಾಡಲು ರಸ್ತೆಯಿಲ್ಲದೆ ಚಿಪ್ಪುಗಲ್ಲುಗಳ ಕಾಲುದಾರಿಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ರಾಜಾರೋಷವಾಗಿ ಅಕ್ರಮ ಗಣಿಕಾರಿಕೆ ನಡೆಸುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿರುವ ಗಣಿ ಮಾಫಿಯಾದ ಜಾಲವನ್ನು ಬಯಲಿಗೆಳೆಯಬೇಕು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರು ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರನ್ನು ರಕ್ಷಿಸಬಾರದು. ಕಾನೂನು ಕ್ರಮಕೈಗೊಳ್ಳುವ ಮೂಲಕ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.