ಆಳಂದ; ಮುಂದಿನ ವರ್ಷ ಫೆ. 8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಜರುಗಲಿರುವ ಮಹಿರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಆಳಂದ ತಾಲೂಕಿನ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಮನವಿ ಮಾಡಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಸಮುದಾಯದ ಜನರನ್ನು ಭೇಟಿಯಾಗಿ ಮಾತನಾಡಿದ ಅವರು, ವಾಲ್ಮೀಕಿ ಪೀಠದ 26ನೇ ವಾರ್ಷಿಕೋತ್ಸವ, ಲಿಂ. ಪುಣ್ಯಾನಂದಪುರಿ ಮಹಾಸ್ವಾಮಿಗಳ 17ನೇ ಪುಣ್ಯಾರಾಧನೆ ಹಾಗೂ ಪ್ರಸನ್ನಾನಂದ ಸ್ವಾಮೀಜಿ ಅವರ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ವಾಲ್ಮೀಕಿ ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಸಮಾಜದ ಜನರು ಭಾಗವಹಿಸಬೇಕು ಎಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಜಾತ್ರೆಯ ವಾಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ದತ್ತಾ ಜಮಾದಾರ, ಗೌರವ ಅಧ್ಯಕ್ಷ ಕಾಶಪ್ಪ ಜಮಾದಾರ, ಸಮಾಜದ ಮುಖಂಡರಾದ ಜ್ಞಾನೇಶ್ವರ ಜಮಾದಾರ, ಶ್ರೀಶೈಲ ಜಮಾದಾರ, ಲಕ್ಷ್ಮೀಕಾಂತ ಜಮಾದಾರ, ರೂಪಚಂದ ಮಂಡ್ಲೆ, ಸೂರ್ಯಕಾಂತ ಮಂಡ್ಲೆ, ಗೋವಿಂದ ಮಂಡ್ಲೆ ಇದ್ದರು.