ಕಲಬುರಗಿ: ಸಂವಿಧಾನದ ಆಶಯಗಳಾದ ಮಹಿಳೆಯರಿಗೆ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ ನಿರಪೇಕ್ಷತೆಗಳನ್ನು ಜಾರಿಗೊಳಿಸಬೇಕೆಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಗಂಗಾ ರುಮ್ಮಾ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾರತೀಯ ಮಹಿಳಾ ಒಕ್ಕೂಟದ(ಓಈIW) ಪ್ರಥಮ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತ ಹಿಂದಿನ ದಿನಗಳಲ್ಲಿಯು ಬುದ್ಧ, ಬಸವ, ಅಂಬೇಡ್ಕರರು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವ “ವಚನ” ಜಗತ್ತಿಗೆ ನೀಡಿ ಅದರಂತೆ ನಡೆದು ಮಹಿಳೆಯರ ಗೌರವ ಹೆಚ್ಚಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಿಳಾ ಮುಖಂಡರಾದ ಪದ್ಮಾವತಿ ಎನ್ ಮಾಲಿ ಪಾಟೀಲ ಮಾತನಾಡುತ್ತ ನಮ್ಮ ದೇಶ ಚಂದ್ರಯಾನವನ್ನು ಯಶಸ್ವಿಯಾಗಿ ನಡೆಸಿರುವುದು ನಮಗೆ ಹೆಮ್ಮೆಯ ವಿಷಯವಾದರೂ ಜನರ ಹಸಿವೆ, ಅಪೌಷ್ಟಿಕತೆ ನಿವಾರಣೆಯಾಗದೆ ಭಾರತವು 2023 ರಲ್ಲಿ ಜಾಗತಿಕ ಹಸಿವೆಯ ಸೂಚ್ಯಂಕದಲ್ಲಿ 125 ರಾಷ್ಟ್ರಗಳ ಪೈಕಿ 111ನೇ ಸ್ಥಾನ ಗಳಿಸಿರುವುದು ದುರಂತದ ಸಂಗತಿ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಕ್ಕಳು ಮತ್ತು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಇದರಿಂದಾಗಿ ಹಲವು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿವೆ. ಅದಕ್ಕಾಗಿ ಮಹಿಳೆಯರು ಜಾಗೃತರಾಗಿ ಹೋರಾಟ ಮಾಡಿ ತಮ್ಮ ಹಕ್ಕನ್ನು ಪಡೆಯಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ. ಸಂಗೀತಾ ಎಮ. ಶೃಂಗೇರಿ, ಮಹಿಳಾ ಮುಖಂಡರಾದ ಸಾವಿತ್ರಿ ಎಸ್ ಪಾಲ್ಕಿ, ಶಿವಲಿಂಗಮ್ಮ ಪೂಜಾರಿ, ಜಯಶ್ರೀ ಕುಸಾಳೆ, ಮಹಾನಂದ ತುಕ್ಕಾಣಿ, ಚಂದಮ್ಮ ಉದನೂರ, ಮೀನಾಕ್ಷಿ ತೆಲಂಗಿ, ಶಿಲ್ಪಾ ಕ್ಷಿರಸಾಗರ, ಲಕ್ಷ್ಮಿಬಾಯಿ ರಾಜೋಳ, ಸಿದ್ದಮ್ಮ ಪೂಜಾರಿ, ಯಶೋಧ ರಾಠೋಡ್, ವಿಜಯಲಕ್ಷ್ಮಿ ಯಳಸಂಗಿ, ಆರತಿ ಲೆಂಗಟೀಕರ, ನಾಗಮ್ಮ ಮಾಲಿ ಪಾಟೀಲ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.