ಕಾಂತಾರಾಜ್ ವರದಿ ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆಗೆ ಕೆ. ನೀಲಾ ಒತ್ತಾಯ

0
87

ಕಲಬುರಗಿ: ಜಾತಿ ಸಮೀಕ್ಷೆಯ ಹೆಚ್ ಕಾಂತಾರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಸಿಪಿಐಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಆಗ್ರಹಿಸಿದ್ದಾರೆ.

ಹೆಚ್. ಕಾಂತರಾಜರವರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015 ರಲ್ಲಿ ಸುಮಾರು 170 ಕೋಟಿ ರೂಗಳ ಸಾರ್ವಜನಿಕ ವೆಚ್ಚದಲ್ಲಿ, ಸರ್ಕಾರದ ಸುಪರ್ಧಿಯಲ್ಲಿರುವ 22,180 ಮೇಲ್ವಿಚಾರಕ ಅಧಿಕಾರಿಗಳ ಉಸ್ತುವಾರಿಯಲ್ಲಿ 1,33,140 ನೌಕರ ಗಣತಿದಾರರು ಒಂದು ತಿಂಗಳ ಕಾಲ ರಾಜ್ಯದಾದ್ಯಂತ ತಲಾ 150 ರಿಂದ 175 ಮನೆಗಳಿಗೆ ಭೇಟಿ ಮಾಡಿ ಸುಮಾರು 55 ಪ್ರಶ್ನೆಗಳ ಮೂಲಕ, ಸುಮಾರು 1,351 ಜಾತಿ – ಉಪ ಜಾತಿಗಳ ಕುಟುಂಬಗಳಿಂದ ಸಂಗ್ರಹಿಸಲಾದ ಮಹತ್ವದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿ ಗಣತಿಯು ಅಗಾಧ ಶ್ರಮ ಹಾಗೂ ಸಂಪನ್ಮೂಲಗಳ ವ್ಯಯದೊಂದಿಗೆ ಸಿದ್ಧಪಡಿಸಲಾದ ವರದಿಯನ್ನು ಪಟ್ಡಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮೂಲೆಗುಂಪಾಗಲು ಬಿಡಬಾರದು. ವರದಿಯನ್ನು ಕೂಡಲೇ ಸಾರ್ವಜನಿಕ ಚರ್ಚೆಗೆ ದೊರೆಯುವಂತೆ ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಕಳೆದ ಸ್ವಾತಂತ್ರ್ಯ ನಂತರದ 76 ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲ ಸಮುದಾಯಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಲಕ್ಷಾಂತರ ಕೋಟಿ ರೂಗಳ ವ್ಯಯ ಮಾಡಿದ್ದು ಅದರ ಫಲಿತಾಂಶವನ್ನು ಇಂತಹ ಸಮೀಕ್ಷೆಗಳ ಮೂಲಕ ರಾಜ್ಯದ ಜನತೆ ತಿಳಿಯುವುದು ಅಗತ್ಯವಿದೆ.

ವರದಿಯು, ಸಾರ್ವಜನಿಕ ಚರ್ಚೆಗೆ ಬಹಿರಂಗ ಗೊಂಡ ನಂತರವೇ ಅದು ಸರಿ ಇದೆಯಾ ಅಥವಾ ವ್ಯತ್ಯಸ್ಥವಾಗಿದೆಯಾ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಅದು ಬಿಡುಗಡೆಯಾಗದೇ, ಅದರಲ್ಲೇನಿದೆಯೆಂಬುದು ತಿಳಿಯದೇ ಊಹೆಯ ಮೇಲೆ ವಿರೋಧಿಸುವುದು ಅಥವಾ ಬೆಂಬಲಿಸುವುದು ಸರಿಯಾದ ಕ್ರಮವಾಗಿಲ್ಲ ಎಂದು ತಿಳಿಸಿದ್ದಾರೆ.

ನಿಜಾ, ಬಹುಶಃ ಸಮೀಕ್ಷೆಯ ಫಲಿತಾಂಶ ಮತ್ತು ಅದರಿಂದಾಗ ಬಹುದಾದ ಮುಂದಿನ ಕ್ರಮಗಳು, ಕೆಲವರನ್ನು ಭಯ ಭೀತಿಗೊಳಿಸಿರುವುದರಿಂದ ಅದನ್ನು ವಿರೋಧಿಸಿ ತಡೆಯುವ ಕ್ರಮಗಳಿಗೆ ಅವುಗಳು ಸರಕಾರದ ಮೇಲೆ ಒತ್ತಡ ಹೇರುತ್ತಿರುವಂತೆ ಕಾಣುತ್ತಿದೆ. ಖಂಡಿತಾ, ವೈಜ್ಣಾನಿಕವಾದ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯು, ಕೆಲವರ ಕೈನಲ್ಲಿ ಕೇಂದ್ರೀಕೃತವಾದ ಅಧಿಕಾರ ಹಾಗೂ ಕೆಲವರಿಗೆ ಲಾಭಕರವಾಗಿರುವ ಸಾರ್ವಜನಿಕ ವೆಚ್ಚದ ಹೂರಣವನ್ನು ಬಯಲಿಗೆಳೆಯಲಿದೆ. ಹೀಗಾಗಿ ಈ ಕೆಲವರಿಗೆ ಅಧಿಕಾರ ಹಾಗೂ ಸಾರ್ವಜನಿಕ ವೆಚ್ಚದಿಂದ ಸಿಗುವ ಆದಾಯವು ಕಡಿತಗೊಳ್ಳಬಹುದೆಂಬ ಭೀತಿಯು ಕಾಡುತ್ತಿರಬಹುದೆಂದು ಟೀಕಿಸಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಠಿಯಿಂದ ಇಂತಹ ಸಮೀಕ್ಷೆಗಳ ಅಗತ್ಯವಿದೆ. ಆದ್ದರಿಂದ ಇದರ ಸತ್ಯಾಸತ್ಯತೆ ಜನತೆ ತಿಳಿಯುವಂತಾಗಲು ಈ ವರದಿ ಬಹಿರಂಗವಾಗುವುದು ಅಗತ್ಯವಾಗಿದೆ. ಯಾವುದೇ ಆಂತರಿಕ ಹಾಗೂ ಬಾಹ್ಯ ಒತ್ತಡಗಳಿಗೆ ಮಣಿಯದೇ ಮುಖ್ಯಮಂತ್ರಿಗಳು ಆಯೋಗದ ವರದಿಯನ್ನು ಸಾರ್ವ ಜನಿಕ ಚರ್ಚೆಗೆ ಬಿಡುಗಡೆ ಮಾಡುವಂತೆ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here