ಕಲಬುರಗಿ; ಬೆಂಕಿಯ ಅವಗಡ ಸಂಭವಿಸದಂತೆ ಮುಂಜಾಗ್ರತೆ ವಹಿಸುವುದು ಬಹು ಮುಖ್ಯ ಎಂದು ಅಗ್ನಿಶಾಮಕ ದಳದ ಠಾಣಾಧಿಕಾರಿಯಾದ ಶೋಭಿತ ಪಿ ಕೆ. ಹೇಳಿದರು.
ನಗರದ ಸಂತೋಷ ಕಾಲನಿಯನಲ್ಲಿರುವ ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಗ್ನಿಶಾಮಕ ದಳದ ವತಿಯಿಂದ ಹಮ್ಮಿಕೊಂಡಿರುವ ಅಗ್ನಿಶಾಮಕ ದಳದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಯಾವುದೇ ಸಂದರ್ಭದಲ್ಲಿ ಬೆಂಕಿ ಸಂಭವಿಸಿದಾಗ ಎದೆಗುಂದದೆ ನೀರು, ಗ್ಯಾಸ್, ಲಿಕ್ವಿಡ್ ಗಳಿಂದ ತಕ್ಷಣ ಬೆಂಕಿ ಆರಿಸಿ ಜೀವ ಉಳಿಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸರಿಯಾದ ರೀತಿಯಲ್ಲಿ ಉಪಯೋಗಿಸಿ ಮುಂಜಾಗ್ರತೆ ವಹಿಸಿ ಕಾರ್ಯ ಮಾಡುವುದು ಬಹು ಮುಖ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಕೆಎಚ್‌ಬಿ ಗ್ರೀನ್ ಪಾರ್ಕ ನಿವಾಸಿಗಳ ಸಂಘದ ಅಧ್ಯಕ್ಷರಾದ ಸಂಜಿವಕೂಮಾರ ಶೆಟ್ಟಿ ಮಾತನಾಡುತ್ತಾ ಅಗ್ನಿಶಾಮಕ ದಳದವರು ತಮ್ಮ ಜೀವದ ಹಂಗನ್ನು ತೊರೆದು ನಮ್ಮೆಲ್ಲರ ಜೀವ ಉಳಿಸುವ ಕಾರ್ಯ ನಿರಂತರವಾಗಿ ಮಾಡುತ್ತಾರೆ. ಹಗಲು ರಾತ್ರಿ ಎನ್ನದೆ ಸೇವೆ ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಿಸುತ್ತಿರುವ ಕಾರ್ಯ ಮೆಚ್ಚುವಂತದ್ದು,ಅವರು ಕೂಡ ದೇಶದ ಯೋಧರು ಎಂದು ಹೇಳಿದರು.
ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಪ್ರಕಾಶ ಕಟ್ಟಿಮನಿ, ಶಶಿಧರ, ಬಸವರಾಜ ಅವರಿಗೆ ಸಂಘದ ಪರವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೇರಿದಂತೆ ಬಡಾವಣೆಯ ಅನೇಕ ಜನ ಭಾಗವಹಿಸಿದ್ದರು.