ಸುರಪುರ: ಇಂದು ಪೋಷಕರು ತಮ್ಮ ಮಕ್ಕಳಿಗೆ ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್ ಕಲಿಸುವ ವ್ಯಾಮೋಹ ಹೆಚ್ಚಾಗುತ್ತಿದೆ,ಇಂಗ್ಲಿಷ್ ಕೇವಲ ಕೆಲಸಕ್ಕಾಗಿ ಬೇಕು ಆದರೆ ಮಕ್ಕಳಿಗೆ ಹೆಚ್ಚು ಕನ್ನಡವನ್ನು ಕಲಿಸುವಂತೆ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ ತಿಳಿಸಿದರು.
ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ,ಮನೆಯಲ್ಲಿ ಮನದಲ್ಲಿ ಕನ್ನಡವನ್ನು ಉಳಿಸಿಕೊಂಡರೆ ಸಾಹಿತ್ಯ,ಸಂಗೀತ,ಸಂಸ್ಕಾರ ಎಲ್ಲವೂ ಉಳಿಯಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂತಹ ಪ್ರಶಸ್ತಿಯನ್ನು ನೀಡುವ ಮೂಲಕ ನಾಡು ನುಡಿ ಸೇವೆಗಾಗಿ ದುಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯ ಅಮೋಘವಾಗಿದೆ,ನಮ್ಮ ರಿಕ್ರಿಯೇಷನ್ ಕ್ಲಬ್ ಕೂಡ ಇಂತಹ ಕಾರ್ಯಕ್ಕೆ ಸದಾಕಾಲ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.
ಪ್ರಶಸ್ತಿ ಪುರಸ್ಕøತ ಟಿಹೆಚ್‍ಓ ಡಾ:ಆರ್.ವಿ.ನಾಯಕ ಮಾತನಾಡಿ,ಇಂದು ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವ ಜೊತೆಗೆ ನನ್ನ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದರು.ಅಲ್ಲದೆ ಒಬ್ಬ ತಾಲೂಕು ಮಟ್ಟದ ಅಧಿಕಾರಿ ಮನಸ್ಸು ಮಾಡಿ ಕೆಲಸ ಮಾಡಿದಲ್ಲಿ ತಾಲೂಕಿನ ಅಭಿವೃಧ್ಧಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು,ಅದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ಮುಖ್ಯವಾಗಲಿದೆ,ನಮ್ಮ ತಾಲೂಕು ಶೈಕ್ಷಣಿಕವಾಗಿ,ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಅಧಿಕಾರಿಗಳ ಶ್ರಮ ಮುಖ್ಯವಾಗಿದೆ,ಅದಕ್ಕಾಗಿ ನನ್ನ ಇಲಾಖೆ ಮಾತ್ರವಲ್ಲದೆ ಎಲ್ಲಾ ಇಲಾಖೆಯ ಅಧಿಕಾರಿಗಳು ಇದಕ್ಕೆ ಶ್ರಮಿಸೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿ,ವರ್ಷದ ವ್ಯಕ್ತಿ ಪ್ರಶಸ್ತಿಯ ಆರಂಭ ಹಾಗೂ ಕಸಾಪ ಘಟಕ ನಡೆದು ಬಂದ ಹಾದಿಯ ಕುರಿತು ಸಮಗ್ರವಾಗಿ ತಿಳಿಸಿದರು.ನಂತರ ಕಸಾಪ ಅಧ್ಯಕ್ಷ ಶರಬಸವ ಯಾಳವಾರ,ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ ವಾರದ್ ಹಾಗೂ ಕರ್ನಾಟಕ ಏಕೀಕರಣದ ಕುರಿತು ರಜಾಕ ಭಾಗವಾನ್ ಉಪನ್ಯಾಸ ನೀಡಿದರು.
ನಂತರ 2023ನೇ ಸಾಲಿನ ವರ್ಷದ ವ್ಯಕ್ತಿಗಳಾಗಿ ಆಯ್ಕೆಯಾದ ಟಿಹೆಚ್‍ಓ ಡಾ:ಆರ್.ವಿ.ನಾಯಕ,ಸಾಹಿತಿ,ಹಿರಿಯ ವೈದ್ಯ ಡಾ. ಸತ್ಯನಾರಾಯಣ ಅಲದರ್ತಿಯವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಾಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದರಿಂದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ ವಾರದ್ ಅವರಿಗೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಶರಣಯ್ಯಸ್ವಾಮಿ ಬಳ್ಳೂಂಡಗಿಮಠ ಅವರಿಗೆ ಗೌರವ ಸನ್ಮಾನ ನಡೆಸಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ,ರಾಜಾ ಪಾಮ ನಾಯಕ ಉಪಸ್ಥಿತರಿದ್ದರು.
ದೇವು ಹೆಬ್ಬಾಳ ನಿರೂಪಿಸಿದರು,ಅನ್ವರ ಜಮಾದಾರ ಸ್ವಾಗತಿಸಿದರು,ಸಾಹೇಬರಡ್ಡಿ ಇಟಗಿ ವಂದಿಸಿದರು.ಕಾರ್ಯಕ್ರಮದಲ್ಲಿ ಹಿರಿಯರಾದ ನಬಿಲಾಲ ಮಕಾಂದಾರ,ಬಸವರಾಜಪ್ಪ ನಿಷ್ಠಿ ದೇಶಮುಖ,ಕನಕಪ್ಪ ವಾಗಣಗೇರ,ಮಹಾಂತೇಶ ಗೋನಾಲ,ಶ್ರೀಶೈಲ ಯಂಕಂಚಿ,ನಿಂಗಣ್ಣ ಚಿಂಚೋಡಿ,ಮಲ್ಲಿಕಾರ್ಜುನಯ್ಯ ಹಿರೇಮಠ,ರಾಘವೇಂದ್ರ ಭಕ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.