ಕಲಬುರಗಿ,ಡಿ.1; ಅಲ್ಟ್ರಾಟೆಕ್ ಸಿಮೆಂಟ್ ಪ್ರಾಯೋಜಕತ್ವದ ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯ ಕೊನೆಯ ನಾಲ್ಕು ಪುರುಷರ ಸಿಂಗಲ್ಸ್ ಲೈನ್ ಅಪ್‍ನಲ್ಲಿ ರಾಮಕುಮಾರ್ ರಾಮನಾಥನ್ ಏಕೈಕ ಭಾರತೀಯರಾಗಿ ಉಳಿದಿದ್ದಾರೆ.
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ ದೈತ್ಯ ಹಂತಕ ಮನೀಶ್ ಸುರೇಶಕುಮಾರ್ ಅವರ ಸವಾಲನ್ನು 7-5, 6-0 ಸೆಟ್‍ಗಳಿಂದ ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟರು.
ದಿನದ ಇತರೆ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ, ಆರ್ಯನ್ ಶಾ ಅವರು ಜಪಾನಿನ ರೋಟಾರೊ ಟಗುಚಿ ವಿರುದ್ಧ 3-6, 2-6 ಹೋರಾಟದಲ್ಲಿ ಸೋತರೆ, ಆರನೇ ಶ್ರೇಯಾಂಕದ ರಿಷಬ್ ಅಗರ್ವಾಲ್ 0-6, 4-6 ರಿಂದ ಜಪಾನಿನ ಎರಡನೇ ಶ್ರೇಯಾಂಕದ ಮತ್ಸುದಾ ರ‌್ಯೂಕಿ ವಿರುದ್ಧ ಸೋಲಿಗೆ ಶರಣಾದರು. ಏಕಪಕ್ಷೀಯ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಕೊನೆಯ ಕ್ವಾರ್ಟರ್‍ಫೈನಲ್ ಟೈನಲ್ಲಿ 6-0, 6-0 ಅಂತರದಲ್ಲಿ ಜಪಾನಿನ ಸೀಟಾ ವಟನಾಬೆ ಅವರನ್ನು ಸೋಲಿಸಿದರು.
ತದನಂತರ ನಡೆದ ಡಬಲ್ಸ್ ಪಂದ್ಯದಲ್ಲಿ ಜಪಾನಿನ ಮತ್ಸುದಾ ಮತ್ತು ತಗುಚಿ ಜೋಡಿ ಭಾರತದ ರಿಷಬ್ ಅಗರ್ವಾಲ್ ಮತ್ತು ಭರತ್ ನಿಶೋಕ್ ಕುಮಾರನ್ ಜೋಡಿಯನ್ನು 7-6 (4), 6-2 ಸೆಟ್‍ಗಳಿಂದ ಸೋಲಿಸಿ ಫೈನಲ್‍ಗೆ ಪ್ರವೇಶಿಸಿದರು. ಫೈನಲ್‍ನಲ್ಲಿ ಅವರು ಆಸ್ಟ್ರಿಯಾ-ಭಾರತ ಜೋಡಿಯಾದ ಡೇವಿಡ್ ಪಿಚ್ಲರ್ ಮತ್ತು ನಿತಿನ್ ಕುಮಾರ್ ಸಿನ್ಹಾ ಅವರೊಂದಿಗೆ ಸೆಣಸಾಡಲಿದ್ದಾರೆ. ಡೇವಿಡ್ ಪಿಚ್ಲರ್ ಮತ್ತು ನಿತಿನ್ ಕುಮಾರ್ ಸಿನ್ಹಾ ಅವರು ಸೆಮಿ ಫೈನಲ್ ಪಂದ್ಯದಲ್ಲಿ ಆದಿಲ್ ಕಲ್ಯಾಣಪುರ ಮತ್ತು ಸಿದ್ಧಾರ್ಥ್ ರಾವತ್ ಜೋಡಿಯನ್ನು 6-3, 6-2 ರಿಂದ ಸೋಲಿಸಿದರು.
ಇತ್ತೀಚೆಗೆ ಎರಡು 25 ಸಾವಿರ ಯು.ಎಸ್. ಡಾಲರ್ ಟೈಟಲ್‍ಗಳನ್ನು ಗೆದ್ದಿರುವ ರಾಮ್‍ಕುಮಾರ್, ತಮ್ಮ ಚೆನ್ನೈ ಸಹವರ್ತಿಯಿಂದ ಮೊದಲ ಸೆಟ್ ನಲ್ಲಿ ಸಮರ್ಥ ಎದುರಾಳಿಯನ್ನು ಎದುರಿಸಿದರು. ಒಂದು ಹಂತದಲ್ಲಿ ಮನೀಷ್ 5-3 ರಿಂದ ಮುನ್ನಡೆ ಸಾಧಿಸಿದ್ದರು. ಹಠಾತ್ ಲಯ ಕಳೆದುಕೊಂಡ ಮನೀಷ್ ಮೂರು ಬಲವಂತದ ತಪ್ಪುಗಳನ್ನು ಮಾಡಿದರು. ಇದು ಪಂದ್ಯದಲ್ಲಿ ಹಿರಿಯ ಆಟಗಾರ ರಾಮನಾಥನ್ ಆಟದಲ್ಲಿ ಹಿಂತಿರುಗಲು ಮಾತ್ರವಲ್ಲದೆ ತಮ್ಮ ನೈಜ ಸ್ವರೂಪದ ಪ್ರದರ್ಶನ ತೋರಲು ಸಾಧ್ಯವಾಯಿತು. ಮುಂದೆ ರಾಮ್‍ಕುಮಾರ್ ಸತತ 10 ಗೇಮ್‍ಗಳನ್ನು ಗೆಲ್ಲುವ ಮೂಲಕ 7-5, 6-0 ಅಂತರದಿಂದ ಮನೀಷ ಅವರನ್ನು ಸೋಲಿಸಿದರು. ರಾಮ್‍ಕುಮಾರ್ ಅವರ ಆಟದ ವೈಶಿಷ್ಟ್ಯಗಳಾದ ಪ್ರಭಾವಶಾಲಿ ಸರ್ವ್ ಮತ್ತು ಬಲವಾದ ಫೋರ್ ಹ್ಯಾಂಡ್ ಪ್ರದರ್ಶನ ಕಂಡುಬಂತು. ಇದು ಮನೀಷನ ಪುನರಾಗಮನದ ಅವಕಾಶಗಳನ್ನು ಮತ್ತಷ್ಟು ಕುಗ್ಗಿಸಿತು.
ಆರ್ಯನ್ ಶಾ ತನ್ನ ಜಪಾನಿನ ಪ್ರತಿಸ್ಪರ್ಧಿ ವಿರುದ್ಧ ಉತ್ತಮ ಪ್ರದರ್ಶನದಿಂದ ಹೆಚ್ಚಿನ ಭರವಸೆ ಮೂಡಿಸಿದ್ದ. 4ನೇ ಗೇಮ್‍ನಲ್ಲಿ ಸರ್ವ್ ಕಳೆದುಕೊಂಡ ನಂತರ, ಮುಂದಿನ ಗೇಮ್‍ನಲ್ಲಿ ಆರ್ಯನ್ ಎದುರಾಳಿಯ ಸರ್ವ್ ಬ್ರೆಕ್ ಮಾಡಿದರು. ಆದಾಗ್ಯೂ ಟಗೋಚಿ ರೋಟಾರೋ ಅವರು 6ನೇ ಗೇಮ್‍ನಲ್ಲಿ ಆರ್ಯನ್ ಶಾ ಅವರ ಸರ್ವ್ ಬ್ರೆಕ್ ಮಾಡಿದಲ್ಲದೆ ಆರ್ಯನ್ ಮಾಡಿದ ತಪ್ಪುಗಳ ಲಾಭವನ್ನು ಪಡೆದುಕೊಂಡು ಟಗೋಚಿ ಮೊದಲ ಸೆಟ್ ಅನ್ನು 6-3 ರಲ್ಲಿ ಗೆದ್ದರು. ಅದೇ ಫಾರ್ಮ್‍ನಲ್ಲಿ ಮುಂದುವರಿದ ಜಪಾನಿ ಆಟಗಾರ ಎರಡನೇ ಸೆಟ್ ಅನ್ನು ಸಹ 6-2 ಅಂತರದಿಂದ ಗೆದ್ದು ಸೆಮಿ ಫೈನಲ್‍ಗೆ ಎಂಟ್ರಿ ಮಾಡಿದರು.
ಪುರುಷರ ಸಿಂಗಲ್ಸ್ (ಕ್ವಾರ್ಟರ್ ಫೈನಲ್ ಫಲಿತಾಂಶಗಳು): 7-ಡೇವಿಡ್ ಪಿಚ್ಲರ್ (ಆಸ್ಟ್ರಿಯನ್) ಅವರು ಜಪಾನಿನ ಸೀತಾ ವಟನಾಬೆ ಅವರನ್ನು 6-0, 6-0; 5-ರಾಮ್‍ಕುಮಾರ್ ರಾಮನಾಥನ್ ಅವರು ಮನೀಶ್ ಸುರೇಶ್‍ಕುಮಾರ್ ಅವರನ್ನು 7-5,6-0; ರೋಟಾರೊ ತಗುಚಿ (ಜಪಾನ್) ಅವರು ಭಾರತದ ಆರ್ಯನ್ ಶಾ ಅವರನ್ನು 6-3, 6-2; 2-ಮತ್ಸುದಾ ರ‌್ಯೂಕಿ (ಜಪಾನ್) ಅವರು 6-ರಿಷಬ್ ಅಗರ್ವಾಲ್ ಅವರನ್ನು 6-0, 6-4 ಅಂತರದಿಂದ ಸೋಲಿಸಿದರು.
ಸೆಮಿಫೈನಲ್ ಲೈನ್ ಅಪ್: ಶನಿವಾರ ನಡೆಯುವ ಮೆನ್ಸ್ ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲಿ 5-ರಾಮ್‍ಕುಮಾರ್ ರಾಮನಾಥನ್ ಅವರು ರೋಟಾರೊ ತಗುಚಿ (ಜಪಾನ್); 7-ಡೇವಿಡ್ ಪಿಚ್ಲರ್ (ಆಸ್ಟ್ರಿಯನ್) ಅವರು 2-ಮತ್ಸುದಾ ರ‌್ಯೂಕಿ (ಜಪಾನ್) ವಿರುದ್ಧ ಸೆಣಸಲಿದ್ದಾರೆ.
ಡಬಲ್ಸ್ (ಸೆಮಿಫೈನಲ್ ಫಲಿತಾಂಶಗಳು): ಜಪಾನಿನ ರ‌್ಯೂಕಿ ಮತ್ಸುದಾ ಮತ್ತು ರೋಟಾರೊ ತಗುಚಿ ಜೋಡಿ ಭಾರತದ ರಿಷಬ್ ಅಗರ್ವಾಲ್ ಮತ್ತು ಭರತ್ ನಿಶೋಕ್ ಕುಮಾರನ್ ಅವರ ಜೋಡಿಯನ್ನು 7-6 (4), 6-2; 2-ಡೇವಿಡ್ ಪಿಚ್ಲರ್ (ಆಸ್ಟ್ರಿಯನ್) ಮತ್ತು ಭಾರತದ ನಿತಿನ್ ಕುಮಾರ್ ಸಿನ್ಹಾ ಅವರು ಆದಿಲ್ ಕಲ್ಯಾಣಪುರ ಮತ್ತು ಸಿದ್ಧಾರ್ಥ್ ರಾವತ್ ಜೋಡಿಯನ್ನು 6-3, 6-2 ಅಂತರಿದಂದ ಸೋಲಿಸಿ ಫೈನಲ್ ಪ್ರವೇಶಿಸಿತು.