ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಹಾಗೂ ಹಿಂಗಾರು ಕೈ ಕೊಟ್ಟಿದ್ದರಿಂದ ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ಇನ್ನು ರೈತರಿಗೆ ಪರಿಹಾರ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಬಾರಿ ಸಕಾಲಕ್ಕೆ ಮುಂಗಾರು ಮಳೆ ಬಾರದೆ ಇರುವುದರಿಂದ ಹೆಸರು,ಉದ್ದು, ಎಳ್ಳು ಕೈ ಕೊಟ್ಟಿವೆ.ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಾಗಿದೆ.ಜಿಲ್ಲೆಯ ಪ್ರಮುಖ ತೊಗರಿ ಬೆಳೆ ಮಳೆ ಅಭಾವದಿಂದ ತತ್ತರಿಸಿದೆ.ಮೇಲಿಂದ ಮಂಜಿನ ಹನಿಗಳಿಂದ ಕೀಟಗಳು ಆವರಿಸಿಕೊಂಡಿದೆ.ಇದಕ್ಕೆ ರೈತರು ಕೀಟನಾಶಕ ಔಷಧಿಗಳಿಗಾಗಿ ಸಾವಿರಾರು ರುಪಾಯಿ ಖರ್ಚು ಮಾಡಿದ್ದಾರೆ.ಇದರಿಂದ ರೈತರಿಗೆ ಮತ್ತಷ್ಟು ಹೊಡೆತ ಬಿದ್ದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಗೆ ಈಗಾಗಲೇ ಬರ ಪರಿಹಾರ ಹಣ 98 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ.ಆದರೆ ಈ ವರೆಗೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ.ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾಗೂ ಕೀಟನಾಶಕಗಳ ಔಷಧಗಳು ಸೇರಿದಂತೆ ಎಕರೆಗೆ 25 ಸಾವಿರ ರೂಪಾಯಿ ಖರ್ಚಾಗಿದೆ.ಪರಿಸ್ಥಿತಿ ಬಿಗಡಾಯಿಸುವ ಮುನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ, ಕೇಂದ್ರದ ಪರಿಹಾರಕ್ಕೆ ಕಾಯದೇ ಕೂಡಲೆ ಎಕರೆಗೆ 30 ಸಾವಿರ ರೂಪಾಯಿ ಬರ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.