Monday, July 15, 2024
ಮನೆಬಿಸಿ ಬಿಸಿ ಸುದ್ದಿನಮೋಶಿ, ಮಲ್ಕಾಪುರೆ ಯಾರಿಗೆ ವಿಪಕ್ಷ ಸ್ಥಾನ?

ನಮೋಶಿ, ಮಲ್ಕಾಪುರೆ ಯಾರಿಗೆ ವಿಪಕ್ಷ ಸ್ಥಾನ?

  • ಡಾ. ಶಿವರಂಜನ ಸತ್ಯಂಪೇಟೆ

ಕಲಬುರಗಿ: ಬೆಳಗಾವಿಯಲ್ಲಿ ನಾಳೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮುನ್ನ ವಿಧಾನಪರಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿ ಕಡೆಯಿಂದ ಕಲ್ಯಾಣ ಕರ್ನಾಟಕದ ವಿಧಾನ ಪರಿಷತ್ ಸದಸ್ಯರನ್ನು ನೇಮಕ ಮಾಡಬೇಕು ಎಂಬ ಒತ್ತಾಯಗಳು ಜೋರಾಗಿ ಕೇಳಿ ಬರುತ್ತಿವೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆರ್. ಅಶೋಕ ಅವರನ್ನು ನೇಮಕ ಮಾಡಲಾಗಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕರನ್ನಾಗಿ ಯಾರನ್ನು ನೇಮಕ ಮಾಡುತ್ತಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.

ಬಿಜೆಪಿಯಿಂದ ಈವರೆಗೆ ವಿಧಾನಸಭೆ-ವಿಧಾನಪರಿಷತ್ ವಿಪಕ್ಷ ನಾಯಕನ ಸ್ಥಾನ ಕೂಡ ಈ ಭಾಗದವರಿಗೆ ಕೊಟ್ಟಿರುವುದಿಲ್ಲ ಎಂದು ಬಿಜೆಪಿ ಶಾಸಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಪರಿಷತ್‍ಗೆ ನಾಲ್ಕು ಬಾರಿ ಆಯ್ಕೆಯಾಗಿರುವ ಶಶೀಲ್ ನಮೋಶಿ ಅವರು ತಮಗೆ ಪ್ರತಿಪಕ್ಷ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಪಕ್ಷದಲ್ಲಿ ಈಗಾಗಲೇ ಅಧಿಕಾರ ದೊರಕಿದ್ದು, ಕಲ್ಯಾಣ ಕನಾಟಕದ ಹಿಂದುಳಿದ ವರ್ಗದವರಿಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ನೀಡಬೇಕು ಎಂಬ ಒತ್ತಾಸೆ ಮತ್ತೋರ್ವ ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ ಅವರದ್ದಾಗಿದೆ.

ಕುರುಬ ಸಮಾಜದ ಮಲ್ಕಾಪುರೆ ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದರೆ ಬಿಜೆಪಿಯ ಜಾತಿ ಲೆಕ್ಕಾಚಾರ ಮತ್ತು ಪಕ್ಷದ ಬಲವರ್ಧನೆಗೆ ಅನುಕೂಲ ಆಗಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಪಕ್ಷದ ವರಿಷ್ಠರ ಮನಸ್ಸು ಮತ್ತು ಮುನಿಸು ಯಾರ ಮೇಲಿದೆ ಎಂಬುದು ನೇಮಕದ ನಂತರವೇ ಬಹಿರಂಗವಾಗಲಿದೆ.

ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕಲ್ಯಾಣ ಕರ್ನಾಟಕ ಭಾಗದಿಂದ 19 ಜನ ಶಾಸಕರು ಆಯ್ಕೆಯಾಗಿದ್ದರೂ ಕೇವಲ ಇಬ್ಬರಿಗೆ ಮಾತ್ರ ಆಗ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ 8 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಕಲ್ಯಾಣ ಕನಾಟಕ ಭಾಗದ ಬಿಜೆಪಿ ಶಾಸಕರಿಗೆ ಸರ್ಕಾರದಲ್ಲಿ ಮನ್ನಣೆ ಸಿಗುತ್ತಿಲ್ಲ. ಹೀಗಾಗಿ ಪಕ್ಷದ ಪ್ರಮುಖ ಸ್ಥಾನಗಳಲ್ಲಾದರೂ ಈ ಭಾಗದವರನ್ನು ನೇಮಕ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಶೀಲ್ ಜಿ. ನಮೋಶಿ ಅವರು ಬಿಜೆಪಿಯಿಂದ 4 ಬಾರಿ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ರಘುನಾಥರಾವ ಮಲ್ಕಾಪುರೆ ಅವರು 2 ಬಾರಿ ವಿಧಾನ ಪರಿಷತ್‍ಗೆ ನಾಮನಿರ್ದೇಶಿತಗೊಂಡಿದ್ದಾರೆ. ಹೀಗಾಗಿ ಹಿರಿಯ ಶಾಸಕ ನಮೋಶಿ ಅವರಿಗೆ ಪ್ರತಿಪಕ್ಷ ಸ್ಥಾನ ನೀಡಬೇಕು. -ರಮೇಶ ಕಡಾಳೆ. ಮಹಾನಗರ ಪಾಲಿಕೆ ಮಾಜಿ ಸದಸ್ಯ, ಕಲಬುರಗಿ

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular