ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನಾ ಖಾಲಿದ ಸೈಪುಲ್ಲಾ ರಹೇಮಾನಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸಂಘಟಿಸಿದ್ದ ದಾರೂಲ್ ಉಲಂ ಸಬೀಲುರ ರಶಾದಿನ 29ನೇ ಸಮಾವೇಶದಲ್ಲಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ, ಮದರಸಾ ಸರ್ವೆ ಹಾಗೂ ಯೂನಿಪಾರ್ಮ್ ಸಿವಿಲ್ ಕೊಡ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಮಾವೇಶದಲ್ಲಿ ಎ.ಐ.ಎಂ.ಪಿ.ಎಲ್.ಬಿಗೆ ನಡೆದ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಖಾಲಿದ ಸೈವುಲ್ಲಾ ರಹೆಮಾನಿ ಅವರನ್ನು ಪುಸ್ತಕಗಳನ್ನು ನೀಡಿ ಅಭಿಮಾನಿಗಳು ಗೌರವಿಸಿದರು. ಎಐಎಂಪಿಎಲ್‌ಬಿ ಉಪಾಧ್ಯಕ್ಷರಾಗಿ ಉಬೇದುಲ್ಲಾ ಖಾನ ಆಜ್ಮಿ, ಕಾರ್ಯದರ್ಶಿಯಾಗಿ ಡಾ.ಯಾಸೀನ್ ಅಲಿ ಉಸ್ಮಾನಿ ಸೇರಿದಂತೆ ಚುನಾಯಿತ ನೂತನ ಎಲ್ಲ ಪದಾಧಿಕಾರಿಗಳನ್ನು ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿವಿಧ ರಾಜ್ಯಗಳಿಂದ ಧಾರ್ಮಿಕ ಮುಖಂಡರು ಹೆಚ್ಚಿನ ಸಂಖ್ಯೆಗಳಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದರು.
ಡಾ.ಮೊಹ್ಮದ ಅಸಗರ ಚುಲಬುಲ್ ಮಾತನಾಡಿ, ನ.23 ಮತ್ತು 24 ರಂದು ನಡೆದ ಈ ಸಮಾವೇಶದಲ್ಲಿ ವಕ್ಫ್ ತಿದ್ದುಪಡೆ ಮಸೂದೆ, ಯು.ಸಿ.ಸಿ ಹಾಗೂ ಮದರಸಾ ಸಮೀಕ್ಷೆ ಸೇರಿದಂತೆ ಪ್ರಮುಖ ವಿಷಯಗಳ ಕರಿತು ಗಂಭೀರವಾಗಿ ಚರ್ಚಿಸಿ, ಪ್ರಮುಖ ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಸ್ಪಂಧಿಸದೇ ಇದ್ದಲ್ಲಿ ವಿವಿಧ ಹಂತಗಳ ಹೋರಾಟ ಮತ್ತು ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಧಾರ್ಮಿಕ ಸ್ಥಳಗಳ ರಕ್ಷಣೆ, ಮುಸ್ಲೀಮ ಇತಿಹಾಸ ಬಿಂಬಿಸುವ ರಸ್ತೆ, ಪ್ರದೇಶ ಊರುಗಳ ಹೆಸರನ್ನು ಬದಲಾಯಿಸುತ್ತಿರುವುದನ್ನು ನಿಲ್ಲಿಸಬೇಕು, ಮುಸ್ಲೀಮರು ದಾರೂಲ ಖಜಾ ನ್ಯಾಯಾಲಯ ಬಳಸಲು ಅವಕಾಶ ನೀಡಬೇಕು, ಪ್ರವಾದಿ ಸೇರಿದಂತೆ ಧರ್ಮಗುರುಗಳ ಅಪಮಾನ ತಡೆಯಲು ಕಾನೂನು ಜಾರಿಗೆ ತರಬೇಕು, ಫೆಲೆಸ್ತಿನ ಮೇಲೆ ನಿರಂತರವಾಗಿ ದಾಳಿ ಮಾಡುವ ಇಸ್ರೇಲ್ ರಾಷ್ಟ್ರಕ್ಕೆ ಭಾರತ ಸರ್ಕಾರ ಎಚ್ಚರಿಕೆ ನೀಡಬೇಕು ಎಂದರು.