ಕಲಬುರಗಿ: ಸ್ಥಳೀಯ ಪಂಚಾಯತ ಸಂಸ್ಥೆಗಳಾದ ಗ್ರಾ.ಪಂ, ತಾ.ಪಂ, ಮತ್ತು ಜಿಲ್ಲಾ ಪಂಚಾಯಗಳಲ್ಲಿ ಸರ್ಕಾರ ವಿಕಲಚೇತನರ ಅಭಿವೃದ್ಧಿಗಾಗಿ ಮಿಸಲಿರಿಸಿದ ಶೇ.5ರಷ್ಟು ಅನುದಾನ ಸೂಕ್ತ ವ್ಯಕ್ತಿಗಳಿಗೆ ದೊರೆಯಬೇಕು. ಆದರೆ ಪ್ರಸ್ತುತವಾಗಿ ಇದು ಬಳಕೆಯಾಗುತ್ತಿಲ್ಲ. ಆದ್ದರಿಂದ ಇವೆಲ್ಲಾ ಸಂಸ್ಥೆಗಳು ವಿಕಲಚೇತನರಿಗೆ ಅನುದಾನವನ್ನು ನೀಡುವ ಮೂಲಕ ಅವರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದು ಅವಶ್ಯಕವಾಗಿದೆ ಎಂದು ಪಿಎಫ್ ಕಚೇರಿಯ ವಿಭಾಗಿಯ ಮೇಲ್ವಿಚಾರಕ ಬಸವರಾಜ ಹೆಳವರ ಯಾಳಗಿ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ‘ಬೀಟಾ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ವಿಶ್ವ ವಿಕಲಚೇತನ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಸತ್ಕಾರ ವೀಕರಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ವಿಕಲಚೇತನರ ಬಗ್ಗೆ ಅನುಕಂಪ ತೋರಿದರೆ ಸಾಲದು. ಬದಲಿಗೆ ಅವರಿಗೆ ದೊರೆಯಬೇಕಾದ ಎಲ್ಲಾ ಸವಲತ್ತುಗಳು ಒದಗಿಸಿಕೊಡಬೇಕು. ಅವರನ್ನು ನೋಡುವ ದೃಷಿ ಉತ್ತಮವಾಗಬೇಕು. ವಿಕಲಚೇತನರು ಕೂಡಾ ತಮ್ಮಲಿರುವ ಕೀಳರಿಮೆಯನ್ನು ಬಿಟ್ಟು, ಧನಾತ್ಕಕ ಚಿಂತನೆಯನ್ನು ರೂಢಿಸಿಕೊಂಡರೆ, ಸಾಮಾನ್ಯರಿಗಿಂತಲೂ ಕಡಿಮೆಯಿಲ್ಲದ ಸಾಧನೆ ಮಾಡಲು ಸಾಧ್ಯವಿದೆ.
ವಿಕಲಚೇತನರ ಹಕ್ಕುಗಳ ಅಧಿನಿಯಮ-2016ರನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳು ಸ್ಥಾಪನೆಯಾಗಿದ್ದು, ವಿಕಲಚೇತನರು ಇವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು. ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆಯುವುದನ್ನು ತಡೆಗಟ್ಟಿ, ನೈಜ ವಿಕಲಚೇತನರಿಗೆ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ವಿಶೇಷಚೇತನ ವಿದ್ಯಾರ್ಥಿ ವೇತನ ಮತ್ತು ವಿಕಲಚೇತನ ಮಾಸಿಕ ಪಿಂಚಣಿಯ ಮೊತ್ತವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಸ್ಲಾಂ ಶೇಖ್, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಇರ್ಫಾನ್ ಶೇಖ್ ಸೇರಿದಂತೆ ಮತ್ತಿತರಿದ್ದರು.