ವಾಡಿ: ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಜಾರಿಗೆ ಬಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ನಮ್ಮೆಲ್ಲರಿಂದಾಗಲಿ ಎಂದು ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಬೂತ್ ಮಟ್ಟದಿಂದ ಸಾರ್ವಜನಿಕರ ಗಮನಕ್ಕೆ ತರುವ ಸಭೆಯಲ್ಲಿ ಮಾತನಾಡಿದರು.
ಸರಕಾರ ಕುಶಲಕರ್ಮಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದರ ಜೊತೆಗೆ ಅವರುಗಳಿಗೆ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿ, ಸ್ವಾವಲಂಭಿ ಜೀವನ ನಡೆಸುವುದರೊಂದಿಗೆ ಆರ್ಥಿಕರಾಗಿ ಸಬಲರಾಗಬೇಕು, ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಿಸುವ ಪ್ರಧಾನ ಮಂತ್ರಿಯವರ ಮಹತ್ವದ ವಿಶ್ವಕರ್ಮ ಯೋಜನೆಯಾಗಿದೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ನೀಡಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಒದಗಿಸಲು ನಾವು ಶ್ರಮಿಸಿ, ಸಾಮಾಜಿಕ ಕಾಳಜಿ ಮೆರೆಯಬೇಕಾಗಿದೆ ಎಂದರು.
ಯೋಜನೆಯ ತಾಲ್ಲೂಕ ಸಲಹೆಗಾರ ಭರತ ಮುತ್ತಗಾ ವಿಶ್ವಕರ್ಮ ಯೋಜನೆಯ ಅರ್ಜಿ ಸಲ್ಲಿಕೆ ಬಗ್ಗೆ ವಿವರಿಸಿ ಬಡಗಿತನ, ಮರಗೆಲಸ, ದೋಣಿ ತಯಾರಿಕೆ, ಬೀಗ ತಯಾರಕರು, ನೇಕಾರರು, ಕುಂಬಾರಿಕೆ, ಪಾದರಕ್ಷೆ ತಯಾರಿಕೆ, ಚರ್ಮಗಾರಿಕೆ, ಅಕ್ಕಸಾಲಿಗರು, ಕಮ್ಮಾರರು, ಅಗಸರು, ಟೈಲರ್, ಶಿಲ್ಪ ರಚನಾಕಾರರು, ಚಮ್ಮಾರ, ಮೇಸ್ತ್ರಿ, ಗೊಂಬೆ, ಆಟಿಕೆ ತಯಾರಕರು, ಬುಟ್ಟಿ ತಯಾರಿಸುವವರು, ದೋಬಿಗಳು, ಕ್ಷೌರಿಕರು, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಮಾಲೆ ತಯಾರಕರು ಸೇರಿದಂತೆ ಇತರರು ಈ ಯೋಜನೆಯಡಿ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ನಮ್ಮಲ್ಲಿನ ಆನ್ಲೈನ್ ಸೇವಾ ಕೇಂದ್ರದಲ್ಲಿ ಯೋಜನೆಗೆ ನೋಂದಣಿ ಮಾಡಬಹುದು ಎಂದರು. ಆಯ್ಕೆಯಾದ ಫಲಾನುಭವಿಗಳಿಗೆ ಡಿಜಿಟಲ್ ಐ.ಡಿ ಕಾರ್ಡ್ ಹಾಗೂ ಪಿ.ಎಂ ವಿಶ್ವಕರ್ಮ ಪ್ರಮಾಣ ಪತ್ರವನ್ನು ನೀಡುವುದರ ಜೊತೆಗೆ ಮೂಲಭೂತ ಕೌಶಲ್ಯ ತರಬೇತಿ ಹಾಗೂ ಉಪಕರಣಗಳ ಜೊತೆಗೆ ಶೇ.5ರ ಬಡ್ಡಿ ದರದಲ್ಲಿ ಒಂದು ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಕೂಡ ದೊರಕುತ್ತದೆ ಎಂದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಉಪಾಧ್ಯಕ್ಷ ಪ್ರಕಾಶ ಪುಜಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮಹಿಳಾ ಮೂರ್ಚಾದ ಸದಸ್ಯರಾದ ಅನುಸುಬಾಯಿ ಪವಾರ, ಅನ್ನಪೂರ್ಣ ದೊಡ್ಡಮನಿ,ಉಮಾದೇವಿ ಗೌಳಿ ,ಮುಖಂಡರಾದ ಮಲ್ಲಿಕಾರ್ಜುನ ಸಾತಖೇಡ, ಮಹಾಲಿಂಗ ಶೆಳ್ಳಗಿ, ಅಯ್ಯಣ್ಣ ದಂಡೋತಿ, ಶ್ರೀಕಾಂತ ಪಂಚಾಳ, ಪ್ರೇಮ ತೇಲ್ಕರ ಸೇರಿದಂತೆ ಇತರರು ಇದ್ದರು.