ಆಳಂದ; ಕಾಯಕಯೋಗಿ, ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಹಾಗೂ ಶತಾಯುಷಿಗಳಾಗಿದ್ದ ದಿ. ರುಕ್ಮಯ್ಯ ಸಾಬಯ್ಯ ಗುತ್ತೇದಾರ ಅವರ 8ನೇ ಪುಣ್ಯಸ್ಮರಣೆ, ರೈತ ದಿನಾಚಾರಣೆ ಮತ್ತು ಧರ್ಮಸಭೆ ಕಾರ್ಯಕ್ರಮ 23ನೇ ಡಿಸೆಂಬರ್ ಬೆಳಿಗ್ಗೆ 11 ಗಂಟೆಗೆ ಆಳಂದ ತಾಲೂಕಿನ ತಡಕಲ ಗ್ರಾಮದಲ್ಲಿ ಜರುಗಲಿದೆ ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.
ಬುಧುವಾರ ಆಳಂದ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಂದಗಾಂವದ ರಾಜಶೇಖರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಾರಕೂಡನ ಚೆನ್ನವೀರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ವಹಿಸಲಿದ್ದು, ಮಾಡಿಯಾಳದ ಒಪ್ಪತ್ತೇಶ್ವರ ಸ್ವಾಮೀಜಿ, ಮಾದನಹಿಪ್ಪರ್ಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಶಾಂತವೀರ ಶಿವಾಚಾರ್ಯರು, ಚಿಣಮಗೇರಿಯ ವೀರಮಹಾಂತ ಶಿವಾಚಾರ್ಯರು, ಕೇಸರ ಜವಳಗಾದ ವೀರಂತೇಶ್ವರ ಶಿವಾಚಾರ್ಯರು, ಬಂಗರಗಾದ ಗುರುಲಿಂಗ ಶಿವಾಚಾರ್ಯರು, ಕಿಣ್ಣಿಸುಲ್ತಾನದ ಶಿವಶಾಂತಲಿಂಗ ಶಿವಾಚಾರ್ಯರು, ತಡಕಲನ ಸಿದ್ಧಮಲ್ಲ ಶಿವಾಚಾರ್ಯರು ಉಪಸ್ಥಿತರಿರುವರು.
ದಿ. 22ನೇ ಡಿಸೆಂಬರ್‍ದಂದು ರಾತ್ರಿ ಮಲ್ಲಯ್ಯ ಶಾಸ್ತ್ರೀಗಳಿಂದ ಕೀರ್ತನೆ, ಶಿವರುದ್ರಯ್ಯ ಸ್ವಾಮಿ ಗೌಡಗಾಂವ ಅವರಿಂದ ಸಂಗೀತ ಸೌರಭ ಮತ್ತು ವಿವಿಧ ಭಜನಾ ಮಂಡಳಿಗಳಿಂದ ಜಾಗರಣೆ ನಡೆಯಲಿದೆ.
ಕೃಷಿಯಲ್ಲಿ ಸಾಧನೆ ಮಾಡಿರುವ ನಾಗರಾಜ ಶೇಗಜಿ ಸೇರಿದಂತೆ ಹತ್ತು ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು. ವಿಶೇಷ ಆಹ್ವಾನಿತರಾಗಿ ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ಶಿರಸಿಯ ಮಧುಕೇಶ್ವರ ಹೆಗಡೆ ಅವರಿಂದ ವಿಶೇಷ ಉಪನ್ಯಾಸ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಡಕಲ ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಬೆಳ್ಳೆ, ಹಿರಿಯ ಸಾಹಿತಿ ಅಪ್ಪಾಸಾಹೇಬ ಗುಂಡೆ, ಜಯಾನಂದ ಬಿರಾದಾರ, ಸಿದ್ದಾರೂಢ ಬುಜುರ್ಕೆ ಇದ್ದರು.