ಕಲಬುರಗಿ: ಜಿಲ್ಲೆಯಲ್ಲಿರುವ ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಪಕ್ಷಾತೀತವಾಗಿ ಜಿಲ್ಲೆಯ ಶಾಸಕರು ,ಸಂಸದರು ಮುಂದಾಗಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಬುರಗಿ ಜಿಲ್ಲೆಯಲ್ಲಿ ಅನೇಕ ಅಣೆಕಟ್ಟುಗಳು ಇವೆ.ಅವುಗಳಲ್ಲಿ ಅಧೀಕ ಪ್ರಮಾಣದಲ್ಲಿ ನೀರು ಸಂಗ್ರಹವಿದ್ದರೂ ಕಾಲುವೆಗಳಲ್ಲಿ ನೀರು ಹರಿದು ಬರುತ್ತಿಲ್ಲ.ಇದಕ್ಕೆ ಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ ಅವೈಜ್ಞಾನಿಕ ಪ್ರಮುಖ ಕಾರಣವಾಗಿದೆ. ಮಧ್ಯಮ ನೀರಾವರಿ ಯೋಜನೆಯಾದ ಬೆಣ್ಣೆತೊರಾ ಅಣೆಕಟ್ಟಿನಿಂದ ರೈತರ ಕೃಷಿ ಜಮೀನುಗಳಿಗೆ ನೀರು ಸರಬರಾಜು ಆಗುತ್ತಿಲ್ಲ.ಇದರ ಕಾಲುವೆ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅದೇ ರೀತಿ ಗಂಡೋರಿ ನಾಲಾದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.ಅಮರ್ಜಾ, ಭೀಮಾ, ಮುಲ್ಲಾಮಾರಿ,ಕಾಗೀಣಾನದಂಥ ನದಿಗಳ ನೀರು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ.ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಡ್ಯಾಂ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ರೈತರಿಗೆ ಅನುಕೂಲವಾಗಿದೆ.ಆದರೆ ಉಳಿದಂತೆ ಅಣೆಕಟ್ಟುಗಳು ಕೇವಲ ಹೆಸರಿಗೆ ಮಾತ್ರ ಇರುವುದು ದುರದೃಷ್ಟಕರ ಎಂದು ಖೇದ ವ್ಯಕ್ತ ಪಡಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟುಗಳು ರೈತರಿಗೆ ಉಪಯೋಗಕ್ಕೆ ಬಾರದಾಗಿವೆ.ತೊಗರಿ,ಬಾಳೆ, ಕಬ್ಬು,ಹತ್ತಿ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳು ಬೆಳೆಯಲಾಗುತ್ತಿದೆ.ಆದರೆ ರೈತರ ಕೃಷಿ ಭೂಮಿಗೆ ನೀರು ಹರಿಸಲಾಗುತ್ತಿಲ್ಲ.ನೀರಾವರಿ ಆಗಬೇಕಾಗಿದ್ದ ಸಾವಿರಾರು ಹೆಕ್ಟೇರ್ ಭೂಮಿಗಳು ಇಂದಿಗೂ ಒಣ ಬೇಸಾಯ (ಖುಷ್ಕಿ) ಆಗಿವೆ.ಹೊಸ ಕಾಲುವೆಗಳ ನಿರ್ಮಾಣ ಮಾಡಲು ಸರಕಾರ ಮೀನಮೇಷ ಎಣಿಸುತ್ತಿದೆ.
ಕುಡಿಯುವ ನೀರಿನ ಅನುಷ್ಠಾನಕ್ಕೆ ಕಾಗಿಣಾ ನದಿಯ 10 ಏತ ನೀರಾವರಿ ಯೋಜನೆಗಳ ಕಾಮಗಾರಿ ಕೈಗೊಳ್ಳಲು ಈ ಹಿಂದೆ ಯಡಿಯೂರಪ್ಪ ಸರ್ಕಾರ ಭರವಸೆ ನೀಡಿತ್ತು. ಇನ್ನೂ ವರೆಗೆ ಅನುಷ್ಠಾನಕ್ಕೆ ಬಂದಿಲ್ಲ.ಅದರಂತೆ ಭೀಮಾ ಏತ ನೀರಾವರಿ ಯೋಜನೆ ಹಾಗೂ ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಬೆಣ್ಣೆತೊರೆ ಅಣೆಕಟ್ಟೆಯಿಂದ ನೀರು ಹರಿಸಲು ಕೈಗೊಂಡಿರುವ ಕಾಮಗಾರಿ ವಿಳಂಬವಾಗುತ್ತಿದೆ. ಬೇಸಿಗೆ ವೇಳೆಗೆ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡದಿದ್ದರೆ ಹಾಹಾಕಾರ ಉಂಟಾಗುತ್ತದೆ.ಇದರ ಬಗ್ಗೆ ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಜ್ಞರ ಸಮಿತಿ ರಚಿಸಿ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು. ಕಾಲುವೆಗಳ ಆಧುನೀಕರಣ, ಹೊಸ ಕಾಲುವೆಗಳ ನಿರ್ಮಾಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಜಿಲ್ಲೆಯ ವಿವಿಧ ತಜ್ಞರ ಜೊತೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.