ಕಲಬುರಗಿ : ಸಂವಿಧಾನದ 371ನೇ(ಜೆ) ಕಲಮಿನಡಿ ಗ್ರಾಮೀಣಾಭಿವೃದ್ಧಿ ಮತ್ತು ನೈರ್ಮಲ್ಯಿಕರಣ ಇಲಾಖೆಯಡಿ ಖಾಲಿ ಇರುವ ಹುದ್ದೆಗಳಿಗೆ ಕೆ.ಪಿ.ಎಸ್.ಸಿ. ಮೂಲಕ ಆಯ್ಕೆಯಾದ ಕಲ್ಯಾಣ ಕರ್ನಾಟಕ ಪ್ರದೇಶದ ನೂರಾರು ಅಭ್ಯರ್ಥಿಗಳು ಸರಕಾರ ಹೊರಡಿಸಿರುವ ಸುತ್ತೋಲೆಯ ಲೋಪದೋಷಗಳ ಕಾರಣದಿಂದ ಕೆ.ಎ.ಟಿ.ಯಲ್ಲಿ ಸುತ್ತೋಲೆ ರದ್ದಾಗಿದೆ. ಇದರಿಂದ ಬೀದಿಪಾಲಾದ ಫಲಾನುಭವಿ ಆಯ್ಕೆಯಾದ ನೂರಾರು ಎ.ಇ/ಜೆ.ಇ. ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಯಾವುದೇ ಗತ್ಯಾಂತರವಿಲ್ಲದೇ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಗುರುವಾರ ಹಿಂದಿ ಪ್ರಚಾರ ಸಭಾದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಕೆ.ಎ.ಟಿ. ಸುತ್ತೋಲೆ ರದ್ದತಿಯಿಂದ ಬೀದಿ ಪಾಲಾದ ನೂರಾರು ಜನ ಎ.ಇ/ಜೆ.ಇ. ಫಲಾನುಭವಿ ಅಭ್ಯರ್ಥಿಗಳ ಮತ್ತು ಕಳೆದ 2022ರ ಏಪ್ರಿಲ್‌ನಲ್ಲಿ ಕೆ.ಪಿ.ಎಸ್.ಸಿ.ಯಿಂದ ಜಲಸಂಪನ್ಮೂಲ್ ಇಲಾಖೆಯಡಿ ಆಯ್ಕೆಯಾಗಬೇಕಾದ ಅಭ್ಯರ್ಥಿಗಳ ಸಭೆ ಜರುಗಿತು. ಸಭೆಯಲ್ಲಿ ಎಲ್ಲರ ಸಲಹೆಯಂತೆ ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕೆ.ಎ.ಟಿ.ಯಲ್ಲಿ ಸುತ್ತೋಲೆ ರದ್ದತಿಯಿಂದ ಕಲ್ಯಾಣ ಕರ್ನಾಟಕದ ನೂರಾರು ಎ.ಇ/ಜೆ.ಇ. ಅಭ್ಯರ್ಥಿಗಳಿಗೆ ಕಾಲಮಿತಿಯಲ್ಲಿ ನ್ಯಾಯ ಒದಗಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಸಂವಿಧಾನದ 371ನೇ(ಜೆ) ಕಲಂ ಅಡಿ ನಡೆಯುವ ನೇಮಕಾತಿಗಳಿಗೆ ಭವಿಷ್ಯದಲ್ಲಿ ನ್ಯಾಯಾಲಯಗಳಲ್ಲಿ ಯಾವುದೇ ರೀತಿಯ ಆಕ್ಷೇಪಣೆಗಳು, ದಾವೆಗಳು ಬರದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಒತ್ತಾಯಿಸಲಾಯಿತು.
ಆಯಾ ಇಲಾಖೆಗಳ ನೇಮಕಾತಿಗಳ ಪ್ರಕ್ರಿಯೆಗಳು ಕೈಗೊಳ್ಳುವದಕ್ಕಿಂತ ಪೂರ್ವದಲ್ಲಿ ಅನುಚ್ಛೆದ 371ನೇ(ಜೆ) ಸಂಪುಟ ಉಪ ಸಮಿತಿಯ ಪರಿಶೀಲನೆಯ ನಂತರವೇ ನೇಮಕಾತಿ ಸುತ್ತೋಲೆಗಳು ಹೊರಬರಬೇಕು. ಕೆ.ಎ.ಟಿ.ಯಲ್ಲಿ ಸರಕಾರದ ನಿರ್ಲಕ್ಷತನದಿಂದ ಸುತ್ತೋಲೆ ರದ್ದತಿಯಿಂದ ಆಗಿರುವ ಅನ್ಯಾಯವನ್ನು ಕಾಲಮಿತಿಯಲ್ಲಿ ಸರಿಪಡಿಸದಿದ್ದರೆ ಅಭ್ಯರ್ಥಿಗಳು ರಾಜಧಾನಿ ಬೆಂಗಳೂರು ಸೇರಿದಂತೆ, ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಲಾಗಿದೆ.
2022 ಅಕ್ಟೋಬರ ತಿಂಗಳಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 166 ಜೆ.ಇ. ಹುದ್ದೆಗಳ ಭರ್ತಿಗೆ ಕೆ.ಪಿ.ಎಸ್.ಸಿ. ಪ್ರಕ್ರಿಯೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸದೆ ವಿನಾಕಾರಣ ಒಂದು ವರ್ಷ ನೆನೆಗುದಿಗೆ ಹಾಕಿರುವುದು ಖಂಡನಾರ್ಹವಾಗಿದ್ದು, ಈ ಬಗ್ಗೆ ತಕ್ಷಣ ಕಾಲಮಿತಿಯಲ್ಲಿ ಮುಂದಿನ ಪ್ರಕ್ರಿಯೆಯನ್ನು ಕೈಗೊಂಡು ಮೊದಲನೇ ಹಂತವಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸಬೇಕು. ಅದರಂತೆ ಮುಂದಿನ ಪ್ರಕ್ರಿಯೆ ಕಾಲಮಿತಿಯಲ್ಲಿ ಕೈಗೊಳ್ಳಬೇಕು. ಸದರಿ ವಿಷಯದಲ್ಲಿ ಕೆ.ಪಿ.ಎಸ್.ಸಿ. ನಿರ್ಲಕ್ಷ ಧೋರಣೆ ಅನುಸರಿಸಿದರೆ ರಾಜಧಾನಿ ಬೆಂಗಳೂರು ಸೇರಿದಂತೆ, ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಫಲಾನುಭವಿ ಜೆ.ಇ. ಅಭ್ಯರ್ಥಿಗಳು ಬೀದಿಗಿಳಿದು ಹೋರಾಟ ಮಾಡಲಾಗುವದೆಂದು ನಿರ್ಧರಿಸಲಾಯಿತು.
371ನೇ(ಜೆ) ಕಲಂ ಸಂಪುಟ ಉಪ ಸಮಿತಿಯ ಅಧ್ಯಕ್ಷರು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆರವರು ಮತ್ತು ಉಪ ಸಮಿತಿಯ ಸದಸ್ಯರುಗಳು ಹಾಗೂ ಸಚಿವರುಗಳಾದ ಡಾ. ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ರಹಿಂ ಖಾನ್, ಎನ್.ಎಸ್. ಭೋಜರಾಜ್, ಡಿ. ಸುಧಾಕರ, ಬಿ.ನಾಗಿಂದ್ರರವರುಗಳು ಕೆ.ಎ.ಟಿ.ಯಲ್ಲಿ ರದ್ದಾದ ಸುತ್ತೋಲೆಯಿಂದ ಸಂವಿಧಾನದ 371ನೇ(ಜೆ) ಕಲಮಿಗೆ ಮಾರಕ ಪರಿಣಾಮ ಬೀರುವುದರಿಂದ ಸದರಿ ವಿಷಯಕ್ಕೆ ಗಂಭೀರವಾಗಿ ಪರಿಗಣಿಸಿ ಭವಿಷ್ಯದಲ್ಲಿ ಹೀಗೆ ಆಗದಂತೆ ದಿಟ್ಟ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸರಕಾರ ನಮ್ಮ ಬೇಡಿಕೆಗಳಿಗೆ ಒಂದೆರಡು ವಾರಗಳಲ್ಲಿ ಸ್ಪಂದನೆ ನೀಡದಿದ್ದರೆ, ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಂತೆ ಹೋರಾಟ ನಡೆಸಲಾಗುವುದು.ಸಭೆಯಲ್ಲಿ ನಿರ್ಧರಿಸಿರುವಂತೆ ಕಲ್ಯಾಣ ಕರ್ನಾಟಕದ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಬೆಂಗಳೂರಿಗೆ ನಿಯೋಗ ಹೋಗಲು ಸಹ ತೀರ್ಮಾನಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ ಸಮಿತಿಯ ತಜ್ಞರು ಮತ್ತು ಹಿರಿಯ ಮುತ್ಸದ್ದಿಗಳು ಹಾಗೂ ಬಹುತೇಕ ಸದಸ್ಯರು ಸಲಹೆ ನೀಡಿದಂತೆ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸರಕಾರಕ್ಕೆ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಮಾಡಲು ಸರಕಾರಕ್ಕೆ ಗಡುವು ನೀಡಲು ನಿರ್ಧರಿಸಲಾಯಿತು. ಅದರಂತೆ, ಇದಕ್ಕೆ ವಿಷಯವನ್ನಾಗಿ ಮಾಡಿಕೊಂಡು ಬರುವ ದಿನಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಪ್ರೊ. ಬಸವರಾಜ ಕುಮನೂರ, ನ್ಯಾಯವಾದಿಗಳಾದ ಅಶೋಕ ಮಣೂರ, ಡಾ. ಮಾಜಿದ್ ದಾಗಿ, ಪ್ರೊ. ಸಾಲೋಮನ ದಿವಾಕರ, ಸಂತೋಷ ಜವಳಿ, ಭೀಮಶೆಟ್ಟಿ ಮುಕ್ಕಾ, ಬಿ.ಬಿ. ನಿಂಗಪ್ಪ, ಭೀಮರಾಯ ಕಂದಳ್ಳಿ, ಅಬ್ದುಲ ಖದೀರ್, ಶಾಂತಪ್ಪ ಕಾರಭಾಸಗಿ, ಮಲ್ಲಿನಾಥ ಸಂಗಶೆಟ್ಟಿ, ರಾಜೆ ಶಿವಶರಣ, ಶಿವಾನಂದ ಕಾಂದೆ, ಫಲಾನುಭವಿ ಅಭ್ಯರ್ಥಿಗಳಾದ ವಿನೋದಕುಮಾರ, ಸುನೀಲಕುಮಾರ, ಶಶಿಕಲಾ, ಅಶ್ವಿನಿ, ಆಶಾರಾಣಿ, ಲಕ್ಷ್ಮಿ ಮಹಿಬೂಬ, ದಾವಲೆ ಅರ್ಜನಗಿ, ಕಾರ್ತಿಕ ರೆಡ್ಡಿ ಸೇರಿದಂತೆ ನೂರಾರು ಜನ ಅಭ್ಯರ್ಥಿಗಳು ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳದಿಂದ ಆಗಮಿಸಿ ಭಾಗವಹಿಸಿದರು.