ಶಹಾಬಾದ: ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಕೃಷಿ ಹಾಗೂ ರೈತರೇ ದೇಶದ ಬೆನ್ನೆಲುಬು. ಉತ್ತರ ಕರ್ನಾಟಕ ಪ್ರಮುಖ ಆಹಾರ ಬೆಳೆಯಾದ ಜೋಳದ ಬಿತ್ತನೆ, ಬೆಳೆಯುವತ್ತ ರೈತರು ಹೆಚ್ಚಿನ ಚಿತ್ತ ಹರಿಸಬೇಕಾಗಿದೆ. ಜೋಳದಿಂದ ಆಹಾರ ಧಾನ್ಯ, ದನ-ಕರುಗಳಿಗೆ ಮೇವು ದೊರೆಯುತ್ತದೆ. ವಾಣಿಜ್ಯ ಬೆಳೆಗಳ ಮೇಲೆಯೇ ಸಂಪೂರ್ಣ ಅವಲಂಬನೆ ಬೇಡ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ಅವರು ಸಮೀಪದ ನಂದೂರ ಸಮೀಪವಿರುವ ಹೊಲವೊಂದರಲ್ಲಿ ಫಲವತ್ತಾಗಿ ಬೆಳೆದ ಜೋಳಕ್ಕೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ, ರೈತರಿಗೆ ಅಧಿಕ ಇಳುವರಿ ದೊರೆಯಲಿ ಎಂದು ಪ್ರಾರ್ಥಿಸುವ ‘ಹಸಿರು ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಪ್ರಾರ್ಥನೆ ಗೀತೆಯನ್ನು ಹಾಡಿದರು. ಪ್ರಸ್ತುತ ಅನಾವೃಷ್ಟಿಯ ಸಂದರ್ಭದಲ್ಲಿಯೂ ಆರು ಅಡಿಗಿಂತ ಎತ್ತರ ಮತ್ತು ದಪ್ಪನೆಯೆ ತೆನೆ ಹೊತ್ತ ಜೋಳ ಕೈಬೀಸಿ ಕರೆಯುತ್ತಿದೆ. ಹಸಿರುಟ್ಟ ಬೆಳೆ ನೋಡಿದರೆ ಸಂತೋಷ ಉಂಟಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖಿ, ಮಹೇಶ ನಾಯ್ಕೊಡಿ, ಶರಣಪ್ಪ ಪೂಜಾರಿ, ಶಿವಾಜಿ ಬಂಗಾರಿ ಸೇರಿದಂತೆ ಮತ್ತಿತರರಿದ್ದರು.