ಶಹಾಬಾದ: ವೈಜ್ಞಾನಿಕ, ಧರ್ಮನಿರಪೇಕ್ಷ ಮತ್ತು ಜನತಾಂತ್ರಿಕ ಮೌಲ್ಯಗಳಿಗೆ ಬದ್ಧವಾದ ಹಾಗೂ ಸಾರ್ವತ್ರಿಕ ಶಿಕ್ಷಣವನ್ನು ಖಾತ್ರಿಪಡಿಸುವ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಕಾರ್ಯದರ್ಶಿ ಎಸ್.ಜಿ.ಮಹೇಶ ಅವರು ಹೇಳಿದರು.
ಅವರು ತಾಲೂಕಿನ ಭಂಕೂರ ಗ್ರಾಮದ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜನಪರ ಶಿಕ್ಷಣ ನೀತಿ ರೂಪಿಸುವ ಚರ್ಚಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ಕಲಿಕೆಗೆ ಮಾರಕವಾದ, ಕಾಪೆರ್Çರೇಟ್ ಪರವಾದ ಹಾಗೂ ತಾರತಮ್ಯದಿಂದ ಕೂಡಿರುವ ಎನ್‍ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ-2020)ಯ ವಿರುದ್ಧ ಶಿಕ್ಷಣ ತಜ್ಞರ ಹಾಗೂ ರಾಜ್ಯದ ಜನತೆಯ ಬೆಳೆಸಿದ ಹೋರಾಟಕ್ಕೆ ಕರ್ನಾಟಕ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಶಿಕ್ಷಣ ವಿರೋಧಿ ಎನ್‍ಇಪಿ-2020 ಅನ್ನು ಹಿಂಪಡೆಯುವುದಾಗಿ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣಾ ಹಿಬ್ರಾಹಿಂಪುರ ಮಾತನಾಡಿ, ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ನಿಷ್ಪಕ್ಷಪಾತವಾಗಿರುವ ಹಾಗೂ ಶಿಕ್ಷಣಕ್ಕೆ ಬದ್ಧವಾಗಿರುವ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಸಾಹಿತಿಗಳು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿ-ಪೆÇೀಷಕರನ್ನು ಒಳಗೊಂಡ ಒಂದು ಜನತಾಂತ್ರಿಕ ಸಮಿತಿಯನ್ನು ಈ ಕೂಡಲೇ ರಚಿಸಬೇಕು. ಈ ಸಮಿತಿಯು ವ್ಯಾಪಕ ಜನತಾಂತ್ರಿಕ ಚರ್ಚೆಗಳ ಮೂಲಕ ಜನಪರ ಶಿಕ್ಷಣ ನೀತಿಯನ್ನು ರೂಪಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವೇಂದ್ರ ಅಂಗಡಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಚರ್ಚಾಕೂಟದಲ್ಲಿ ಕಾಲೇಜಿನ ಉಪನ್ಯಾಸಕಿ ಅನಿತಾ ಹಿರೇನೂರ, ಉಪನ್ಯಾಸಕ ವಿಜಯಕುಮಾರ ಹಾಬಾನೂರ, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕು.ಅಶ್ವಿನಿ ಸ್ವಾಗತಿಸಿದರು, ಉಪನ್ಯಾಸಕ ಶಶಿಕಾಂತ ಮಡಿವಾಳ ನಿರೂಪಿಸಿದರು, ಉಪನ್ಯಾಸಕ ಶಿವುಕುಮಾರ ಕುಸಾಳೆ ವಂದಿಸಿದರು