ಭಾಲ್ಕಿ; ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಹಾಗೂ ಪೂಜ್ಯ ಶ್ರೀ ನಾಗಲಿಂಗ ಸ್ವಾಮಿಗಳವರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಕುವೆಂಪು ಅವರು ನಮ್ಮ ನಾಡು ಕಂಡ ಅಪ್ರತಿಮ ಸಾಹಿತಿಗಳು ಆಗಿದ್ದರು. ಅವರಿಂದಲೇ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಜಾತ್ಯಾತೀತತೆ ಮತ್ತು ವಿಶ್ವಮಾನವತೆ ಮೌಲ್ಯಗಳು ಕುವೆಂಪು ಅವರ ಬದುಕಿನ ಮೌಲ್ಯಗಳಾಗಿದ್ದವು. ಒಂದರ್ಥದಲ್ಲಿ ಬಸವಾದಿ ಶರಣರ ಚಿಂತನೆಗಳನ್ನೆ ಅಧುನಿಕ ಭಾಷೆಯಲ್ಲಿ ತಮ್ಮ ಸಾಹಿತ್ಯದ ಮೂಲಕ ಜನಮನಕ್ಕೆ ತಲುಪಿಸಿದ ಕೀರ್ತಿ ಕುವೆಂಪು ಅವರದಾಗಿದೆ.
ನಿಸರ್ಗದ ಕುರಿತು ಅಪಾರ ಪ್ರೀತಿ ಹೊಂದಿರುವ ಕುವೆಂಪು ಅವರು ವೈಚಾರಿಕವಾಗಿ ಕನ್ನಡ ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅವರ ಸಮಗ್ರ ಸಾಹಿತ್ಯ ನಮ್ಮಲ್ಲಿ ವಿಶ್ವಮಾನವೀಯತೆಯ ಪ್ರಜ್ಞೆಯನ್ನು ಬೆಳೆಸುತ್ತದೆ. ಅಂತಹವರ ಸ್ಮರಣೆ ನಮ್ಮ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಪೂಜ್ಯ ಶ್ರೀ ನಾಗಲಿಂಗ ಸ್ವಾಮಿಗಳು ಶ್ರೀಮಠದ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರಾಗಿದ್ದರು. ಅವರು ದಾಸೋಹಂ ಭಾವನೆಯಿಂದ ಸಾಹಿತ್ಯ ಪ್ರಕಟಣೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ನಾಗಭೂಷ ಮಾಮಡಿ ಅವರು ಅನುಭಾವ ನೀಡಿ ಕುವೆಂಪು ಅವರ ಜೀವನ ಸಾಧನೆಯ ಕುರಿತು ಮಾತನಾಡಿದರು. ಗಣೇಶ ಗಡ್ಡೆ, ಕಲ್ಯಾಣರಾವ, ಸಂತೋಷ ಹಡಪದ, ರಾಜು ಜುಬರೆ, ಶಿವಾನಂದ ಕತ್ತೆ, ಸುರೇಶ ಕನ್ನಶೆಟ್ಟೆ ಮುಂತಾದವರು ಉಪಸ್ಥಿತರಿದ್ದರು. ಬಾಬು ಬೆಲ್ದಾಳ ಅವರು ನಿರೂಪಿಸಿದರು. ಶ್ರೀಮಠದ ಮಕ್ಕಳಿಂದ ವಚನ ಪ್ರಾರ್ಥನೆ ನೆರವೇರಿತು.