ಸುರಪುರ: ತಾಲೂಕಿನ ಕಿರದಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಕೆಂಚಮ್ಮ,ಮರಗಮ್ಮ ಜಾತ್ರೆ ಹೆಸರಲ್ಲಿ ನೂರಾರು ಕೋಣ ಕುರಿಗಳ ಬಲಿಯನ್ನು ನೀಡುತ್ತಿದ್ದು ಇದನ್ನು ತಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ತಾಲೂಕು ಸಂಚಾಲಕ ಹಣಮಂತ ಭದ್ರಾವತಿ ಆಗ್ರಹಿಸಿದರು.
ನಗರದ ಪೊಲೀಸ್ ಠಾಣೆ ಬಳಿಯಲ್ಲಿ ಈ ಕುರಿತು ಮಾತನಾಡಿ,ನಮ್ಮ ಸಂಘಟನೆಯಿಂದ ಈಗಾಗಲೇ ಜಿಲ್ಲಾಧಿಕಾರಿಗಳಿಗೆ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ,ಡಿವೈಎಸ್ಪಿ,ಹುಣಸಗಿ ಸರ್ಕಲ್‍ಗೆ,ಕೆಂಭಾವಿ ಠಾಣೆಗೆ ಹಾಗೂ ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಿದ್ದೇವೆ,ಈಗಲೂ ಒತ್ತಾಯ ಮಾಡುತ್ತಿದ್ದು,ಇದೇ ಜನೆವರಿ 8 ಮತ್ತು 9 ರಂದು ಕಿರದಳ್ಳಿಯಲ್ಲಿ ನಡೆಯುವ ಗ್ರಾಮ ದೇವತೆ ಜಾತ್ರೆ ಹೆಸರಲ್ಲಿ ಕೋಣ ಕುರಿಗಳ ಬಲಿಯನ್ನು ತಡೆಯಲೇ ಬೇಕು,ಕೋಣ ಕುರಿಗಳ ಬಲಿಯ ಮೂಲಕ ಗ್ರಾಮದಲ್ಲಿ ಅಸ್ಪøಷ್ಯತೆ ಜೀವಂತವಾಗಿಡುವ ಕೆಲಸ ನಡೆಯುತ್ತಿದೆ,ಅಲ್ಲದೆ ಮೇಲು ಕೀಳು ಎನ್ನುವ ಪ್ರದರ್ಶನ ನಡೆಯುತ್ತದೆ.
ಈಗಾಗಲೇ ಯಾವುದೇ ಪ್ರಾಣಿಯನ್ನು ದೇವರ ಹೆಸರಲ್ಲಿ ಹತ್ಯೆ ಮಾಡಬಾರದು ಎನ್ನುವ ಕಾನೂನು ಇದೆ,ಆದರೆ ದೇವರ ಹೆಸರಲ್ಲಿ ಕಿರದಳ್ಳಿಯಲ್ಲಿ ಪ್ರತಿಬಾರಿ ಜಾತ್ರೆ ನಡೆದಾಗ ನೂರಾರು ಕೋಣ ಕುರಿಗಳ ಬಲಿ ನೀಡಲಾಗುತ್ತದೆ,ದಲಿತರನ್ನು ಬಲಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ,ಇದೆಲ್ಲದಕ್ಕೂ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಒಂದು ವೇಳೆ ನಾವು ಇಷ್ಟೊಂದು ಒತ್ತಾಯ ಮಾಡಿದರು ಕೋಣ ಕುರಿಗಳ ಬಲಿ ನಡೆದಲ್ಲಿ ಅದಕ್ಕೆ ನೇರವಾಗಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಕಾರಣವಾಗಲಿದೆ,ಇದರ ವಿರುದ್ಧ ನಮ್ಮ ಸಂಘಟನೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ವಾಗಣಗೇರಿ,ಬಸವರಾಜ ಚಿಂಚೋಳಿ,ಬಸವರಾಜ ಹೊಸ್ಮನಿ ಕಕ್ಕೇರಾ,ಮಲ್ಲಪ್ಪ ದೊಡ್ಮನಿ ತಳವಾರಗೇರ,ಸಾಹೇಬಗೌಡ ವಾಗಣಗೇರ ಸೇರಿದಂತೆ ಇತರರಿದ್ದರು.
ಕಿರದಳ್ಳಿ ಗ್ರಾಮದಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರ ಸಭೆ ಮಾಡಿ ಕೋಣ ಕುರಿ ಬಲಿ ನೀಡದಂತೆ ಜಾಗೃತಿ ಮೂಡಿಸಲಾಗಿದೆ. ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ,ಹಾಗೊಮ್ಮೆ ಕೋಣ ಕುರಿ ಬಲಿ ನಡೆಸಿದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಕಿರದಳ್ಳಿ ಗ್ರಾಮಸ್ಥರಿಗೂ ಈ ಮೂಲಕ ಗ್ರಾಮ ದೇವತೆ ಜಾತ್ರೆಯಲ್ಲಿ ಯಾವುದೇ ಕೋಣ ಕುರಿ ಬಲಿ ನಡೆಸದಂತೆ ಈ ಮೂಲಕ ತಿಳಿಸುತ್ತೇನೆ. -ಕೆ.ವಿಜಯಕುಮಾರ ತಹಸೀಲ್ದಾರ್.