ಕಲಬುರಗಿ: ರಾಜ್ಯದಲ್ಲಿ ಮೂವರು ಡಿಸಿಎಂ ವಿಚಾರ ಹೈಕಮಾಂಡದ ಮುಂದಿಲ್ಲ ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ವಿಮಾನನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತಮಾಡಿದ ಅವರು ರಾಜ್ಯದ ಬೆಳವಣಿಗೆಗಳ ವಿಚಾರವಾಗಿ ಸಿಎಂ ಸಿದ್ದರಾಮಯ್ಯ,ಡಿಕೆ ಶಿವಕುಮಾರ ಅವರು ಉತ್ತರಿಸುತ್ತಾರೆ. ನಮ್ಮ ಮುಂದೆ ಇಂತಹ ಪ್ರಸ್ತಾವನೆ ಇಲ್ಲ ಇದೆಲ್ಲಾ ಉಹಾಪೋಹ. ನಮ್ಮ ಗುರಿ ಮುಟ್ಟುವರೆಗೆ ಇಂತಹದಕ್ಕೆ ಅವಕಾಶ ಕೊಡಬಾರದು ಎಂದರು.
ಎಲೆಕ್ಷನ್ ಸಂದರ್ಭದಲ್ಲಿ ಇಂತಹ ವಿಚಾರ ಬರಬಾರದು. ಸದ್ಯಕ್ಕೆ ಸರಕಾರ ನಡೆಸುವ ಕಡೆಗೆ, ಸಮಸ್ಯೆಗಳ ಕಡೆಗೆ ಗಮನ ಕೊಡಬೇಕು. ನಮ್ಮ ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡವ ಕೆಲಸ ಸಿದ್ದರಾಮಯ್ಯ, ಡಿಕೆಶಿವಕುಮಾರ, ಪರಮೇಶ್ವರ ಎಲ್ಲರೂ ಮಾಡುತ್ತಿದ್ದಾರೆ ಎಂದು ವಿಶ್ವ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಾಳೆ ಸಭೆ ನಡೆಯಲಿದ್ದು, ಸಭೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗಳನ್ನು ಹಾಕಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು ಎಂದರು.
ಇನ್ನು ದೇಶದಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಇಂಡಿಯಾ ಒಕ್ಕೂಟ ಒಂದಾಗಿ, ಒಗ್ಗಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ. ಅದೇ ರೀತಿ ಒಂದಾಗಿ ಕೆಲಸ ನಿರ್ವಹಿಸುತ್ತೇವೆ. ನಾಳೆ ದೆಹಲಿಯಲ್ಲಿ ಅನೇಕ ಘಟಕಗಳ ಮೀಟಿಂಗ್ ಕರೆದಿದ್ದೇವೆ ಎಂದು ತಿಳಿಸಿದರು.
ಲೋಕ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ 500 ಕ್ಕೂ ಹೆಚ್ಚು ಮತಕ್ಷೇತ್ರಗಳುಗೆ ಈಗಾಗಲೇ ಅಬ್ಸರ್ವರ್ ಗಳನ್ನು ನೇಮಕ ಮಾಡಿದ್ದೇವೆ. ಅದರೆ ಜಿಲ್ಲಾ ಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ಉಸ್ತುವಾರಿಗಳನ್ನು ನೇಮಿಸಿದ್ದೇವೆ ಎಂದರು.
ಮಿತ್ರರಾಷ್ಟ್ರ ಮಾಲ್ಡೀವ್ಸ್ ವೈರತ್ವ ಸಾಧಿಸುತ್ತಿರುವ ಬಗ್ಗೆ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ, ಮೋದಿ ಅವರ ಫಾರೆನ್ ಪಾಲಿಸಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮೋದಿ ಅವರು ಬಂದ ಮೇಲೆ ಎಲ್ಲವೂ ಪರ್ಸನಲ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನಮ್ಮ ನೇಬರ್ ಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟಕ್ಕೂ ಸಿದ್ದರಾಗಬೇಕಾಗುತ್ತದೆ. ಇಂದಿರಾಗಾಂಧಿ ಯಾವ ರೀತಿ ಪಾಕಿಸ್ತಾನವನ್ನು ಬೇರ್ಪಡಿಸಿ ಬಾಂಗ್ಲಾದೇಶ ನಿರ್ಮಾಣ ಮಾಡಿದರೋ ಅಂತಹ ಹೋರಾಟ ಮಾಡಬೇಕಾಗುತ್ತದೆ. ಅಂತರಾಷ್ಟ್ರೀಯ ಪಾಲಿಸಿ ವಿಚಾರದಲ್ಲಿ ಮೋದಿಯವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಯಾವಾಗ ಯಾರನ್ನು ಬೇಕಾದರೂ ತಬ್ಬಿಕೊಳ್ಳುತ್ತಾರೆ, ಯಾರನ್ನು ಬೇಕಾದರೂ ತೆಗಳುತ್ತಾರೆ. ನಾವು ನಮ್ಮ ನೇಬರ್ಸಗಳನ್ನು ಬದಲಾಯಿಸಲಾಗುವುದಿಲ್ಲ ಹಾಗಾಗಿ ಅವರೊಂದಿಗೆ ಚೆನ್ನಾಗಿರಬೇಕು. ನಾವು ಒಂದಾಗಿ ಹೋಗಬೇಕು. ಅವರು ನಮ್ಮ ಮೈಮೇಲೆ ಬಂದಾಗ ದೇಶಕ್ಕಾಗಿ ಹೋರಾಟಕ್ಕೂ ಸಿದ್ದರಾಗಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ್, ಜಗದೇವ್ ಗುತ್ತೇದಾರ್. ಮಜಹರ್ ಆಲಮ್ ಖಾನ್ ಸೇರಿದಂತೆ ಹಲವರು ಇದ್ದರು.