ಕಲಬುರಗಿ: ಬಿಜೆಪಿ ತಮ್ಮ ಅಪಾಯಕಾರಿ ಅಜೆಂಡಾಗಳನ್ನು ಜಾರಿಗೊಳಿಸಲು ಪಾರ್ಲಿಮೆಂಟ್ ಹಾಗೂ ಸಂವಿಧಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಎಸ್‌ಎಫ್‌ಐ ಅಖಿಲ ಭಾರತ ಅಧ್ಯಕ್ಷ ವಿ.ಪಿ.ಸಾನು ಹೇಳಿದ್ದಾರೆ.
ಇಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಎಸ್ಎಫ್ಐ ರಾಜ್ಯ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಮಕ್ಕಳ ಶಿಕ್ಷಣ ಅಭಿವೃದ್ಧಿಪಡಿಸದೆ ರಾಜ್ಯ ಸುಧಾರಣೆ ಅಸಾಧ್ಯ ಎಂದರು. 371 ಜೆ ಕಲಂ ಜಾರಿಯಾಗಿರೋದು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ. ಆದರೆ ಸರ್ಕಾರ ಶಿಕ್ಷಣವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ಈ ಪ್ರದೇಶಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ, ಆರೋಗ್ಯವಿಲ್ಲ. ರಾಜ್ಯದಲ್ಲೇ ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ತಾಲೂಕು ದೇವದುರ್ಗ ಹಾಗೂ ಚಿಂಚೋಳಿಯಾಗಿವೆ. ಈ ಭಾಗದ 8 ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್ಶಿಪ್ ನೀಡುತ್ತೇವೆ ಎಂದು ಹೇಳಿ 17 ವರ್ಷಗಳು ಕಳೆದರೂ ಇನ್ನೂ ನೀಡಿಲ್ಲ.
ಇಂತಹ ಹಿಂದುಳಿದ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಸಾಕಷ್ಟು ಕೈಗಾರಿಗಳು ಬರಬೇಕು. ಆಗ ಮಾತ್ರ ಈ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ ಉದ್ಯೋಗ ನೀಡಲು ಸಾಧ್ಯ. ಇದ್ದ ಕೈಗಾರಿಕೆಗಳನ್ನು ನಾವು ಕಳಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣವಾದ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ನೀತಿಗಳನ್ನು ಹಿಮ್ಮೆಟ್ಟಿಸಬೇಕು ಎಂದರು. ಈ ಭಾಗದ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಗಾಗಿ ಪರದಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬಿಲ್ಡಿಂಗ್ ಗಳ ಕೊರತೆ ಇದೆ. ಆದರೆ ಎಸ್ಸಿ,ಎಸ್ಟಿ ಅಭಿವೃದ್ಧಿಗಾಗಿಯೇ ಸಾವಿರಾರು ಕೋಟಿ ರೂ. ಹಣ ಇದ್ದರೂ ಬಳಕೆಯಾಗದೇ ಕೊಳಿಯುತ್ತಿದೆ. ಮಾನವ ಕೇಂದ್ರಿತ ಅಭಿವೃದ್ಧಿಯಾದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದರು.
ಸಾಹಿತಿ ಡಾ.ಕಾಶಿನಾಥ್ ಅಂಬಲಗಿ ಮಾತನಾಡಿ, ವಿದ್ಯಾರ್ಥಿಗಳು ರಾಜಕೀಯ, ಸಾಮಾಜಿಕ, ಸಾಹಿತ್ಯ ವಲಯಗಳನ್ನು ಆಳವಾಗಿ ಅಧ್ಯಯನ ಮಾಡಬೇಕಿದೆ. ಆ ಮೂಲಕ ವಿದ್ಯಾರ್ಥಿಗಳು ರಾಜಕೀಯ ಪ್ರವೇಶ ಮಾಡಬೇಕಿದೆ. ಜನವಿರೋಧಿ, ಜೀವ ವೀರೋಧಿಗಳನ್ನು ಎದುರಿಸಲು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪ್ರಶ್ನೆ, ಬರಹಗಳನ್ನು, ಹೋರಾಟಗಳನ್ನು ರೂಪಿಸಬೇಕಿದೆ ಎಂದರು. ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜ ದೇಸಾಯಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಎಫ್ಐ ರಾಜ್ಯಾಧ್ಯಕ್ಷ ವಿ. ಅಮರೇಶ್ ಮಾತನಾಡಿದರು. ಕಾರ್ಯಕ್ರಮವನ್ನು ಆಶಾ ಎಂ. ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯರಾದ ಶಬ್ಬೀರ್ ಹವಲ್ದಾರ್, ಮಾಧುರಿ ಬೋಳಾರ್, ರಾಜ್ಯ ಮುಖಂಡರಾದ, ಅಮರೇಶ್ ಕಡಗದ್, ಗಾಯತ್ರಿ ಕೋಲಾರ, ಶಿವಕುಮಾರ್ ಮ್ಯಾಗಳಮನಿ, ಜಿಲ್ಲಾ ಸಂಚಾಲಕ ಸಿದ್ಧಲಿಂಗ ಪಾಳ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪದಾಧಿಕಾರಿ ಗೌರಮ್ಮ, ಮೈಲಾರಿ ದೊಡ್ಟಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.