ಶಹಾಬಾದ : ಕಲಬುರಗಿ ದಕ್ಷಿಣ ಮತಕ್ಷೇತ್ರದ ಕೋಟನೂರ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಕೃತ್ಯವನ್ನು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ತೀವ್ರವಾಗಿ ಖಂಡಿಸಿದ್ದಾರೆ.
ಡಾ.ಬಾಬಾ ಸಾಹೇಬರು ಯಾವುದೇ ಜಾತಿ,ಧರ್ಮಕ್ಕೆ ಒಳಪಡದೇ ಇಡೀ ಮಾನವ ಕುಲ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಪ್ರಪಂದಲ್ಲೇ ಒಂದು ಒಳ್ಳೆಯ ಸಂವಿಧಾನ ರಚಿಸಿ ನೀಡಿದ್ದಾರೆ.ಈ ದೇಶ ನೆಮ್ಮದಿ, ಶಾಂತಿಯಿಂದ ಬದುಕಲು ಜಾತ್ಯಾತೀತ ರಾಷ್ಟ್ರವನ್ನಾಗಿ ರೂಪಿಸಿದ್ದಾರೆ.ಒಂದು ವೇಳೆ ಸಂವಿಧಾನ ರಚಿಸದೇ ಹೋಗಿದ್ದರೇ ಹೆಣ್ಣು ಮಕ್ಕಳು ಮುಂದೆ ಬರಲು ಆಗುತ್ತಿರಲಿಲ್ಲ. ಶಿಕ್ಷಣ, ಮತದಾನ,ಸಮಾನತೆ, ಆರ್ಥಿಕತೆ,ಧಾರ್ಮಿಕ ಸ್ವಾತಂತ್ರ್ಯ ಎಲ್ಲರಿಗೂ ನೀಡಿದ್ದಾರೆ.
ಪ್ರಪಂಚದ ಎಲ್ಲಾ ದೇಶಗಳು ಬಾಬಾ ಸಾಹೇಬರ ಜ್ಞಾನವನ್ನು ಮೆಚ್ಚುತ್ತವೆ.ಭಾರತದಲ್ಲಿ ಮಾತ್ರ ಅವರ ಮೂರ್ತಿಯನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ.ಅಲ್ಲದೇ ಸಂವಿಧಾನವಿರೋಧಿ ಮನುವಾದಿ ಮನಸುಗಳು ಇಂತಹ ದುಷ್ಕøತ್ಯಕ್ಕಿಳಿಯುತ್ತಿವೆ. ದಸಂಸ ಸಮಿತಿಯು ತೀವ್ರವಾಗಿ ಖಂಡಿಸುವ ಮೂಲಕ, ದುಷ್ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.