ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಪಂ ಮುಂಭಾಗದಲ್ಲಿ ಬಾಕಿ ವೇತನ ಪಾವತಿಸಬೇಕೆಂದು ಆಗ್ರಹಿಸಿ ಮಂಗಳವಾರ ಹೊನಗುಂಟಾ ಗ್ರಾಪಂ ಸಿಬ್ಬಂದಿ ಮಲ್ಲಣ್ಣ ಚನ್ನಬಸಪ್ಪಾ ಕುಟುಂಬ ಸಮೇತ ಉಪವಾಸ ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಕರವಸುಲಿಗಾರ ಮಲ್ಲಣ್ಣ ನನಗೆ 28-30 ತಿಂಗಳ ಬಾಕಿ ನಿಂತ ವೇತನ ಪಾವತಿಗಾಗಿ ಹಲವಾರು ಬಾರಿ ಮನವಿ ಮಾಡಿದರೂ ಯಾರು ಕ್ಯಾರೆ ಎನ್ನುತ್ತಿಲ್ಲ. ಸುಮಾರು 32 ತಿಂಗಳಿಂದ ಬಾಕಿ ವೇತನ ನಿಂತಿರುವುದರಿಂದ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ.ಈಗಾಗಲೇ ಸಾಲ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದೆ.
ಈ ಮಧ್ಯೆ ಸಾಲಗಾರರ ಕಾಟವೂ ಹೆಚ್ಚಾಗಿದೆ. ನಾನು ಹಲವಾರು ಬಾರಿ ಗ್ರಾಪಂ ಅಧ್ಯಕ್ಷರಿಗೆ ಅಂಗಲಾಚಿ ಬೇಡಿಕೊಂಡರು ಬಾಕಿ ನಿಂತ ಸಂಬಳ ಪಾವತಿ ಮಾಡಿರುವುದಿಲ್ಲ .ಹೀಗಾಗಿ ನಮ್ಮ ಸಂಸಾರ, ಆರೋಗ್ಯ ಸಮಸ್ಯೆ, ನಮ್ಮ ಮಕ್ಕಳ ಶಾಲೆ ಫೀಸ್ ಕಟ್ಟುವದು ನಮ್ಮ ಮಕ್ಕಳ ಮೇಲೆ ತುಂಬಾ ಪರಿಣಾಮ ಬಿದ್ದಿದ್ದೆ, ಹೀಗಾಗಿ ನಾನು ಅನಿವಾರ್ಯವಾಗಿ ನನ್ನ ಕುಟುಂಬ ಸಮೇತ ಉಪಾಸ ಧರಣಿ ಸತ್ಯಗ್ರಹ ಹಮ್ಮಿಕೊಂಡಿದ್ದೆನೆ ಎಂದರು.ಈಗಾಗಲೇ ನನ್ನೊಬ್ಬನಿಗೆ ಬಿಟ್ಟು 9 ಸಿಬ್ಬಂದಿಗಳಿಗೆ 2 ತಿಂಗಳ ಹಿಂದೆ ವೇತನ ನೀಡಲಾಗಿದೆ. ನಾನು ಒಬ್ಬನೇ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಆಗಿರುತ್ತೇನೆ. ಆದರೂ ನನಗೆ ವೇತನ ನೀಡಲು ಸತಾಯಿಸುತ್ತಿದ್ದಾರೆ.ಕೂಡಲೇ ವೇತನ ಬಿಡುಗಡೆ ಮಾಡಬೇಕು.ಇಲ್ಲದಿದ್ದರೇ ಇಲ್ಲಿಯೇ ನಿರಂತರವಾಗಿಕುಟುಂಬ ಸಮೇತ ಉಪಾಸ ಧರಣಿ ಸತ್ಯಾಗ್ರಹ ನಡೆಸುತ್ತೆನೆ ಎಂದು ಗ್ರಾಪಂ ಅಧಿಕಾರಿಗಳಿಗೆ ಎಚ್ಚರಿಸಿದರು.
ನಂತರ ಗ್ರಾಪಂ ಅಧ್ಯಕ್ಷರು ಹಾಗೂ ಗ್ರಾಪಂ ಪಿಡಿಓ ಅವರು 6 ತಿಂಗಳ ವೇತನವನ್ನು ಪಾವತಿಸಿದ ನಂತರ ಉಪವಾಸ ಧರಣಿ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಇಓ ಮಲ್ಲಿನಾಥ ರಾವೂರ, ಎಡಿ ಈರಣ್ಣ, ಪಿಎಸ್‍ಐ ಚಂದ್ರಕಾಂತ ಮಕಾಲೆ, ಗ್ರಾಪಂ ನೌಕರರ ಅಧ್ಯಕ್ಷ ಮಾರುತಿ ಸುಗ್ಗಾ, ತಾಲೂಕಾ ಪ್ರಧಾನ ಕಾರ್ಯದರ್ಶಿ ಶರಣು ದಿಗ್ಗಾಂವ, ಸಂತೋಷ ದಂಡೋತಿ ಇತರರು ಇದ್ದರು.