ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕಾಡಳಿತದ ವಿರುದ್ಧ ಮಹಿಳಾ ಮತ್ತು ಮಕ್ಕಳೊಂದಿಗೆ ಹಸರಗುಂಡಗಿ ಗ್ರಾಮದಿಂದ ಪಾದಯಾತ್ರೆ ನಡೆಸಿ ಮರಪಳ್ಳಿ ಗಾರಂಪಳ್ಳಿ ಮಾರ್ಗವಾಗಿ ಚಿಂಚೋಳಿ ಅಬಕಾರಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಮಧ್ಯವ್ಯಸನ ಮುಕ್ತ ಗ್ರಾಮಕ್ಕಾಗಿ ಒತ್ತಾಯಿಸಿದರು.
ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು ಸಂಜೆಯಾಗುತ್ತಿದ್ದಂತೆ ಕುಡುಕರ ಉಪಟಳ ಹೆಚ್ಚಾಗಿದ್ದು ಗೃಹಿಣಿಯರಿಗೆ ಮತ್ತು ಯುವತಿಯರಿಗೆ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಬೇಸತ್ತು ಹೋಗಿದ್ದಾರೆ ಇದನ್ನು ತಡೆಯುವಂತೆ ಹಲವಾರು ಬಾರಿ ಗ್ರಾಮದ ಬೀಟ್ ಅಬಕಾರಿ ಗಸ್ತು ಪೋಲಿಸ್ ಸಿಬಂದಿಗೆ ಮೌಖಿಕ ಲಿಖಿತವಾಗಿ ಗ್ರಾಮಸ್ಥರು ಮಹಿಳೆಯರು ವಿದ್ಯಾರ್ಥಿಗಳು ಮಾಹಿತಿ ನೀಡಿದರೆ ಕೇವಲ ಕಾಟಾಚಾರಕ್ಕಾಗಿ ಬಂದು ಹೋಗುತ್ತಾರೆ ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ, ಗಿರಿಮಲ್ಲಪ್ಪ ಪೂಜಾರಿ, ಗೌತಮ ,ರಾಘವೇಂದ್ರ, ಗೋಪಾಲ ಎಂಪಿ, ಶರಣು ಟಿಟಿ, ಮೌನೇಶ, ಹರ್ಷವರ್ಧನ, ಚೇತನ, ಪ್ರವೀಣ ರವರು ಚಿಂಚೋಳಿ ತಾಲೂಕ ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.