ಸುರಪುರ: ಸರಕಾರದ ಮಹತ್ವಾಕಾಂಕ್ಷೆಯ ಸಂವಿಧಾನ ಜಾಗೃತಿ ಜಾಥಾ ಇದೇ 16ನೇ ತಾರಿಖು ಸುರಪುರ ತಾಲೂಕಿಗೆ ಆಗಮಿಸುತ್ತಿದ್ದು,ಕಕ್ಕೇರಾ ಮೂಲಕ ಜಾಥಾ ಆರಂಭವಾಗಲಿದ್ದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಜಾಥಾ ಭೇಟಿ ನೀಡಲಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ತಿಳಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃಧ್ಧಿ ಅಧಿಕಾರಿಗಳ ಸಹಭಾಗಿತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,16ನೇ ತಾರಿಖಿಗೆ ತಾಲೂಕಿಗೆ ಆಗಮಿಸುವ ಜಾಥಾ 23ನೇ ತಾರಿಖು ಸುರಪುರ ನಗರದಲ್ಲಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿ,ಪ್ರತಿ ಗ್ರಾಮ ಪಂಚಾಯತಿಗೆ ಆಗಮಿಸಿದಾಗ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬೇಕು,ಆಯಾ ಗ್ರಾಮಗಳಲ್ಲಿನ ಯುವಕರು,ಸಾರ್ವಜನಿಕರಿಂದ ಸೈಕಲ್ ಅಥವಾ ಬೈಕ್ ರ್ಯಾಲಿಯನ್ನು ಮಾಡಿಸಿ,ಜೊತೆಗೆ ಗ್ರಾಮದಲ್ಲಿ ಜಾಥಾ ನಡೆಸಿ ಸಂವಿಧಾನದ ಬಗ್ಗೆ ಎಲ್ಲರಿಗೂ ತಿಳಿಸುವ ಕಾರ್ಯ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ ಮಾತನಾಡಿ,ಜಾಥಾ ಯಶಸ್ವಿಗೆ ಎಲ್ಲರು ಶ್ರಮಿಸಬೇಕು,ಜಾಥಾ ಗ್ರಾಮಕ್ಕೆ ಬರುವ ಹಿಂದಿನ ದಿನ ಗ್ರಾಮದಲ್ಲಿ ಡಂಗೂರ ಸಾರಿಸಿ ಹಾಗೂ ಶಾಲಾ ಮಕ್ಕಳಿಂದ ಪ್ರಭಾತ ಪೇರಿ ನಡೆಸುವಂತೆ ತಿಳಿಸಿ,ಬಿಸಿಲು ಹೆಚ್ಚಾಗಿರುವುದರಿಂದ ಜಾಥಾದಲ್ಲಿ 6ನೇ ತರಗತಿ ನಂತರದ ಮಕ್ಕಳನ್ನು ಜಾಥಾದಲ್ಲಿ ಭಾಗವಹಿಸಲು ತಿಳಿಸಿ ಎಂದರು.ಅಲ್ಲದೆ ಜಾಥಾದಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಸಂವಿಧಾನದ ಚಿಕ್ಕ ಪುಸ್ತಕಗಳನ್ನು ನೀಡುವಂತೆ ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಎ.ಡಿ ಶೃತಿ ಮಾತನಾಡಿ,ಸಂವಿಧಾನ ಜಾಗೃತಿ ಜಾಥಾದ ಜೊತೆಗೆ ಸರಕಾರದ ಐದು ಗ್ಯಾಂರಂಟಿ ಯೋಜನೆಗಳ ಕುರಿತಾದ ವಾಹನವೂ ಬರುತ್ತಿದ್ದು ಸರಕಾರದ ಪಂಚ ಗ್ಯಾರಂಟಿ ಯೋಜನೆ ಬಗ್ಗೆಯೂ ತಿಳಿಸಬೇಕು ಮತ್ತು ಯಾರಾದರು ಈ ಐದು ಗ್ಯಾರಂಟಿಗಳಿಂದ ವಂಚಿತರಾಗಿದ್ದರೆ ಅಂತವರಿಗೆ ಯೋಜನೆ ಕೊಡಿಸುವ ನಿಟ್ಟಿನಲ್ಲಿ ಸಲಹೆ ನೀಡುವಂತೆ ತಿಳಿಸಿದರು.
ತಾಲೂಕಿನಾದ್ಯಂತ ಜಾಥಾ ಯಶಸ್ವಿಗೊಳಿಸಲು,ಪ್ರತಿ ಗ್ರಾಮ ಪಂಚಾಯತಿಯಲ್ಲೂ ನಡೆಯುವ ಜಾಥಾದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ,ಜಾಥಾ ಯಾವ ಗ್ರಾಮ ಪಂಚಾಯತಿಗೆ ಯಾವ ದಿನ ಬರಲಿದೆ ಎನ್ನುವುದನ್ನೂ ತಿಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳು ಅಭಿವೃಧ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು,ಬಿಲ್ ಕಲೆಕ್ಟರ್‍ಗಳು ಹಾಗೂ ತಾಲೂಕು ಪಂಚಾಯತಿ ಸಿಬ್ಬಂದಿಗಳು ಭಾಗವಹಿಸಿದ್ದರು.