ಕಲಬುರಗಿ; ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು, ಕೈಗಾರಿಕಾ ಮತು ವಾಣಿಜ್ಯ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಕಲಬುರಗಿ ಇವುಗಳ ಸಹಯೋಗದಲ್ಲಿ 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇತ್ತೀಚೆಗೆ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳ ಸಂಘದ ಅಧ್ಯಕ್ಷ ಡಾ. ಗಣಪತಿ ರಾಠೂಡ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತೀಶ ಕುಮಾರ ಮಾತನಾಡಿ, ಸಿಡಾಕ್‍ದಿಂದ ನೀಡುವ ಈ ತರಬೇತಿಯ ಸದುಪಯೋಗ ಪಡೆದುಕೊಂಡು ಒಳ್ಳೆಯ ಉದ್ಯಮಶೀಲರಾಗಬೇಕು ಎಂದರು. ಕಲಬುರಗಿ (ವಿಭಾಗೀಯ ಕಚೇರಿ) ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಅವರು ಮಾತನಾಡಿದರು.
ಕಲಬುರಗಿ ಸಿಡಾಕ್ ಫ್ಯಾಕಲ್ಟಿ ಆಂಡ್ ಕನ್ಸ್‍ಲ್ಟಂಟ್‍ರಾದ ಸೈಯದ್ ಆಷ್ಫಕ್ ಅಹ್ಮದ ಅವರು ಮಾತನಾಡಿ, 10 ದಿನಗಳ ಅವಧಿಯ ತರಬೇತಿಯಲ್ಲಿ ಸಾಧನಾ ಪ್ರೇರಣಾ ತರಬೇತಿ, ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ, ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸಾಲ ಸೌಲಭ್ಯಗಳು ಮತ್ತು ಇತರ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.
ಕಲಬುರಗಿ ಸಿಡಾಕ್ ತರಬೇತಿದಾರರಾದ ನೌಶಾದ ಅಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿ ವರ್ಗ ಮತ್ತು ಇನ್ನಿತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.