ಕಲಬುರಗಿ; ಸಂವಿದಾನ ಜಾಗೃತಿ ಜಾಥಾವು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಬುಧವಾರ ಆಳಂದ ತಾಲೂಕಿನ ನಿರಗುಡಿ ಗ್ರಾಮದಲ್ಲಿ ಸ್ವಾತಂತ್ರ್ಯ ಸೇನಾನಿಗಳ ವೇಷಧಾರಿ ಮಕ್ಕಳು ಜಾಥಾದೊಂದಿಗೆ ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿ ಸಂವಿಧಾನ ಕುರಿತು ಜಾಗೃತಿ ಮೂಡಿಸಿದರು.
ಮಹಾತ್ಮ ಗಾಂಧಿ, ಅಂಬೇಡ್ಕರ, ನೇತಾಜಿ ಸುಭಾಷಚಂದ್ರ ಬೋಸ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ ಮಕ್ಕಳು ಎಲ್ಲರ ಗಮನ ಸೆಳೆದರು.
ಸಂವಿಧಾನ ಜಾಗೃತಿ ಜಾಥಾ ಹದಿನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಸೇಡಂ ತಾಲ್ಲೂಕಿನ ಸೇಡಂ ಅಡಕಿ, ಮದಕಲ್, ಕುರಕುಂಟ, ಕುಕ್ಕುಂದ, ಎಡಗಾ, ತೇಲ್ಕೂರ ಹಾಗೂ ಆಳಂದ ತಾಲ್ಲೂಕಿನ ನಿರಗುಡಿ, ಹೆಬಳಿ, ಪಡಸಾವಳಿ, ಹಿರೋಳ್ಳಿ ಸರಸಂಬಾ ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನ ಮತ್ತು ಬಸವಣ್ಣನವರ ಸಮಾನತೆ ಸಂದೇಶ ಸಾರಿತು.
ಗ್ರಾಮಕ್ಕೆ ಆಗಮಿಸಿದ ಜಾಥಾಗೆ ಮಹಿಳೆಯರು ಸಂವಿಧಾನ ಶಿಲ್ಪಿಗೆ ಹುಮಳೆ ಸುರಿಸಿ ಎಂದಿನಂತೆ ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮೀಣ ಭಾಗದಲ್ಲಿ ಡೊಳ್ಳು, ಹಲಗೆಯಿಂದ ಭರ್ಜರಿ ಸ್ವಾಗತ ನೀಡಲಾಗುತ್ತಿದೆ.
ಸೇಡಂ ತಾಲೂಕಿನ ಮುದಕಲ್ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಕುರಕುಂಟಾದಲ್ಲಿ ಯುವ ಪಡೆ ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ ಮಾಡಿ ಜಾಥಾವನ್ನು ಗ್ರಾಮಕ್ಕೆ ಬರಮಾಡಿಕೊಂಡರು. ಕುಕ್ಕಂದಾದಲ್ಲಿ ವಿವಿಧ ಸಮುದಾಯ ಮುಖಂಡರು, ಸಂಘಟನೆ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಆಳಂದ ತಾಲೂಕಿನ ಹೆಬಳಿ, ಪಡಸಾವಳಿ ಗ್ರಾಮದಲ್ಲಿ ನೀಲಿ ಧ್ವಜ ರಾರಾಜಿಸಿದವು.
ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು.