ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನಲ್ಲಿ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ರೈತರ ಕಲ್ಯಾಣಕ್ಕಾಗಿ ಯಾವುದೇ ಯೋಜನೆ ರೂಪಿಸಿಲ್ಲ.ತೊಗರಿ ಅಭಿವೃದ್ಧಿ ಮಂಡಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.ಇದೊಂದು ರೈತರ ವಿರೋಧಿ ಬಜೆಟ್ ಆಗಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಏತ ನೀರಾವರಿ ಯೋಜನೆಗಳನ್ನು ಪುನಃಶ್ಚೇತನ ಗೊಳಿಸುವುದು ಹಾಗೂ ಕೆರೆಗಳನ್ನು ತುಂಬಿಸುವ ಘೋಷಣೆ ಮಾಡಿದ್ದು ಮತ್ತು ಕಲಬುರಗಿಯಲ್ಲಿ ಉದ್ಯೋಗ ಸೃಷ್ಟಿಗೆ ಮೇಗಾ ಟೆಕ್ಸಟೈಲ್ ಸ್ಥಾಪಿಸಲು ಹೇಳಿರುವುದು ಸ್ವಾಗತಾರ್ಹ.ಹೈದ್ರಾಬಾದ ಕರ್ನಾಟಕ ಭಾಗ ವಿಮೋಚನೆಗೊಂಡು ಅಮೃತ ಮಹೋತ್ಸವದ ಆಚರಣೆಯಲ್ಲಿದೆ.ಆದರೂ ಈ ಪ್ರದೇಶ ಸರ್ಕಾರಗಳಿಂದ ಪದೇ ಪದೇ ನಿರ್ಲಕ್ಷಕ್ಕೆ ಒಳಗಾಗುತ್ತಿದೆ.
ಪ್ರಾದೇಶಿಕ ಅಸಮತೋಲನ ಹೊಗಲಾಡಿಸಲು 371 ಜೇ ಕಲಂ ಜಾರಿಗೆ ಬಂದಿದೆ.ಆದರೆ ಇದು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ.ಇದರ ಸಂಪೂರ್ಣ ಲಾಭ ಇನ್ನು ಸಿಕ್ಕಿಲ್ಲ.ಇಲ್ಲಿಯ ಜನರಿಗೆ ಸವಲತ್ತುಗಳು ಸಿಗುತ್ತಿಲ್ಲ.ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಕಚೇರಿ ಇನ್ನು ಅಸ್ತಿತ್ವಕ್ಕೆ ಬಂದಿಲ್ಲ.371ನೇ ಜೇ ಕಲಂ ಕೇವಲ ರಾಜಕೀಯ ಲಾಭ ಪಡೆಯಲಷ್ಟೇ ಸೀಮಿತವಾಗಿದೆ.
ಸಮರ್ಪಕ ಜಾರಿಗೆಗಾಗಿ ಅನೇಕ ಬಾರಿ ಪ್ರತಿಭಟನೆ ನಡೆಸಿದರು ಮುಖ್ಯಮಂತ್ರಿಗಳು ಕ್ಯಾರೇ ಅನ್ನುತ್ತಿಲ್ಲ.ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುತ್ತಿರುವ ಯೋಜನೆಗಳು ಉತ್ತರ ಕರ್ನಾಟಕದವರ ಪಾಲಾಗುತ್ತಿರುವುದು ನೋಡಿದರೆ ಮುಖ್ಯಮಂತ್ರಿಗಳು ನಮ್ಮ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅನೇಕ ಭರವಸೆಗಳನ್ನು ನೀಡಿದ್ದರು.ನಂತರ ದಿನಗಳಲ್ಲಿ ಕೇವಲ ಸುಳ್ಳು ಭರವಸೆಯಾಗಿ ಉಳಿದಿದ್ದು ಇಲ್ಲಿನ ಜನರಿಗೆ ನಿರಾಸೆ ಮೂಡಿಸಿದೆ.ಈ ಬಾರಿಯಾದರೂ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕೊಡುಗೆಗಳನ್ನು ನೀಡಬಹುದು ಎಂಬ ಊಹೆ ಹುಸಿಯಾಗಿದೆ. ಅನಾವೃಷ್ಟಿಯಿಂದ ರೈತರ ಬೆಳೆಗಳು ನಷ್ಟವಾಗಿದೆ.ಬರ ಪರಿಹಾರದ ಕುರಿತು ಬಜೆಟ್ ನಲ್ಲಿ ಪ್ರಸ್ತಾಪ ಆಗಿಲ್ಲ.ಕೂಡಲೇ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.