ಕಲಬುರಗಿ: ಲಸಿಕೆ ಹಾಕೊಂಡ ಮಗುವಿಗೆ ತೀವ್ರ ಜ್ವರ ಕಂಡುಬಂದರೂ ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿ ಅಫಜಲಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮುಂದೆ ಅಹೋರಾತ್ರಿ ಧರಣಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಮಾದಬಾಳ್ ತಾಂಡಾದ ಆಯುಷ್ಯ ರಾಠೋಡ್ (2) ಮೃತ ಮಗು ಎಂದು ಗುರುತಿಸಲಾಗಿದೆ. ಆಶಾ ಕಾರ್ಯಕರ್ತೆಯರು ತಾಂಡಕ್ಕೆ ಬಂದು ಮಗುವಿಗೆ ಎರಡು ಲಸಿಕೆಗಳನ್ನು ಹಾಕಲಾಗಿದ್ದು ಮಗುವಿಗೆ ಜ್ವರ ಬಂದ ಮೇಲೆ ಮಗುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯರು ಇಲ್ಲದೇ ಇರುವುದರಿಂದ ಆ ಮಗು ಮೃತಪಟ್ಟಿದೆ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದರು. ಇದರಿಂದ ಉದ್ರಿಕ್ತಗೊಂಡು ಆಸ್ಪತ್ರೆಯ ಮುಂದೆಯೇ ಪ್ರತಿಭಟನೆಯನ್ನು ಅಹೋರಾತ್ರಿ ಮಾಡಿದರು.
ನನ್ನ ತಮ್ಮನ ಮಗುವಿಗೆ ತಾಂಡಾದ ವಾರ್ಡ್ ನಂಬರ್ 23ರಲ್ಲಿ ಆಶಾ ಕಾರ್ಯಕರ್ತೆಯರು ಭಾನುವಾರ ಎರಡು ಮೊಳಕಾಲಿಗೆ ಹಾಗೂ ಒಂದು ಇಂಜೆಕ್ಷನ್ ಸೇರಿ ಒಟ್ಟು ಮೂರು ಇಂಜೆಕ್ಷನ್ ಕೊಟ್ಟಿದ್ದಾರೆ. ಜ್ವರ ಬಂದರೆ ಗುಳಿಗೆ ಕೊಡಿ ಎಂದು ಹೇಳಿದ್ದರು. ಜ್ವರ ಬಂದ ಕೂಡಲೇ ಗುಳಿಗೆ ಕೊಟ್ಟಾಗ ಮಗುವಿನ ಬಾಯಲ್ಲಿ ಬುರುಗು ಬರಲಾರಂಭಿಸಿತು. ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದೆವು. ಅಲ್ಲಿ ವೈದ್ಯರು ಇರಲಿಲ್ಲ. ಕೇವಲ ನರ್ಸ್‍ಗಳು ಇದ್ದರು. ಹೀಗಾಗಿ ಮಗು ಮೃತಪಟ್ಟಿದೆ ಎಂದು ಮೃತ ಮಗುವಿನ ದೊಡ್ಡಪ್ಪ ಶ್ರೀಕಾಂತ್ ರಾಠೋಡ್ ತಿಳಿಸಿದ್ದಾರೆ.
ಕರ್ತವ್ಯದಲ್ಲಿದ್ದ ವೈದ್ಯ ಸಂಗಮೇಶ್ ಟಕ್ಕಳಕಿ ಅವರು ಮನೆಯಲ್ಲಿದ್ದರು. ಅಲ್ಲಿಗೆ ಹೋದರೆ ಇಲ್ಲೇಕೆ ಬಂದಿದ್ದೀರಿ ಎಂದು ವೈದ್ಯ ಅವಾಚ್ಯವಾಗಿ ಬೈದು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಬಂದ ಕೆಲವು ನಿಮಿಷಗಳಲ್ಲಿ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿ ತಕ್ಷಣವೇ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಪಿಎಸ್‍ಐ ಮಹೆಬೂಬ್ ಅಲಿ ಅವರು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.ಈ ಸಂದರ್ಭದಲ್ಲಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿನೋದ್ ರಾಠೋಡ್ ಅವರು ಪ್ರತಿಕ್ರಿಯಿಸಿ, ಮಗುವಿಗೆ ಯಾವ ಲಸಿಕೆ ನೀಡಿದ್ದಾರೆ ಹಾಗೂ ಘಟನೆಗೆ ನಿಖರವಾದ ಕಾರಣ ತಿಳಿದ ಮೇಲೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಕಾರರು ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟು ಹಿಡಿದು ಅನಿರ್ಧಿಷ್ಟ ಹೋರಾಟ ಮುಂದುವರೆಸಿದರು.