ಕಲಬುರಗಿ: ದೇಶದಲ್ಲಿ ಇರುವ ಎಲ್ಲ ವಿಕಲಚೇತನರಿಗೆ ಒಂದೇ ತೆರನಾದ ಗುರುತಿನ ಕಾರ್ಡ್ ಇವೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡನ್ನು ಎಲ್ಲ ಕಾರ್ಯಗಳಿಗೆ ಮಾನ್ಯ ಮಾಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಲವಾಡಗಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ದೇಶದ ಎಲ್ಲ ವಿಕಲಚೇತನರಿಗೆ ಅವರ ಅಂಗವೈಕಲ್ಯತೆಗೆ ಅನುಗುಣವಾಗಿ ಸಂಬಂಧಪಟ್ಟ ವೈದ್ಯರು ಪರೀಕ್ಷೆ ಮಾಡಿದ ನಂತರವೇ ಅವರಿಗೆ ಯುಡಿಐಡಿ ಕಾರ್ಡ್ ನೀಡಲಾಗುತ್ತಿದೆ. ಆದಾಗ್ಯೂ, ಕೂಡ ಯಾವುದೇ ಇಲಾಖೆಯಲ್ಲಿ ಇಲ್ಲದ ನಿಯಮಗಳನ್ನು ಶಿಕ್ಷಣ ಇಲಾಖೆಯಲ್ಲಿ ಅಳವಡಿಸುವುದರ ಮೂಲಕ ಶಿಕ್ಷಕರ ವರ್ಗಾವಣೆ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಹಾಗೂ ಬಡ್ತಿ ನೀಡುವ ಸಮಯದಲ್ಲಿ ಯುಡಿಐಡಿ ಕಾರ್ಡನ್ನು ಪರಿಗಣಿಸದೇ ಜಿಲ್ಲಾ ಆಸ್ಪತ್ರೆಯಿಂದ ತ್ರಿಸದಸ್ಯ ಮಂಡಳಿಯಿಂದ ಅಂಗವಿಕಲತೆಯ ಪ್ರಮಾಣಪತ್ರ ತರಲು ಸೂಚಿಸುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಅಲ್ಲದೇ ಪ್ರಮಾಣಪತ್ರ ತರಲು ಅಲ್ಪ ಸಮಯ ನಿಗದಿ ಮಾಡಿರುವುದರಿಂದ ಸರಿಯಾದ ಸಮಯಕ್ಕೆ ಅಂಗವಿಕಲತೆ ಪ್ರಮಾಣಪತ್ರ ಸಿಗದೇ ಇದ್ದಲ್ಲಿ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ. ವಿಕಲಚೇತನ ಶಿಕ್ಷಕರು ಪ್ರಮಾಣಪತ್ರವನ್ನು ತರಲು ಶಾಲೆಯನ್ನು ಬಿಟ್ಟು ಆಸ್ಪತ್ರೆಗೆ ಅಲೆಯುವಂತಾಗಿದೆ. ಪದೇ ಪದೇ ಪ್ರಮಾಣಪತ್ರವನ್ನು ಕೇಳುವ ಪದ್ದತಿಯನ್ನು ಬಿಟ್ಟು ಕೇಂದ್ರ ಸರ್ಕಾರವು ನೀಡಿದ ಯುಡಿಐಡಿ ಕಾರ್ಡ್‍ನ್ನು ಎಲ್ಲ ಕಾರ್ಯಗಳಿಗೆ ಮನವಿ ಮಾಡುವಂತೆ ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಕೋರಿದರೂ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಜರುಗುವ ಎಲ್ಲ ಪ್ರಕ್ರಿಯೆಗಳಲ್ಲಿ ಯುಡಿಐಡಿ ಕಾರ್ಡ್‍ನ್ನು ಕಡ್ಡಾಯಗೊಳಿಸುವ ಮೂಲಕ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸಮ್ಮೇಳನ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ವಿಕಲಚೇತನ ನೌಕರರನ್ನು ಒಂದೆಡೆ ಸೇರಿಸಿ ಜಿಲ್ಲಾ ಮಟ್ಟದ ಸಮ್ಮೇಳನದ ಜೊತೆಯಲ್ಲಿ ವಿವಿಧ ಇಲಾಖೆಗಳಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಕಲಚೇತನ ನೌಕರರನ್ನು ಗುರುತಿಸಿ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ವಿಕಲಚೇತನರಿಗೆ ಸನ್ಮಾನ ಮತ್ತು ಹತ್ತನೇ ತರಗತಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಹೆಚ್ಚು ಅಂಕ ಪಡೆದ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಕುಮಸಿ, ಪ್ರಚಾರ ಸಮಿತಿಯ ಅಧ್ಯಕ್ಷ ಭೀಮಶಾ ಘಾಳೆ, ಗೌರವ ಸಲಹೆಗಾರ ಶಿವಶರಣಪ್ಪ ಕೆಂಚಗೊಂಡ್, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಶಾರದಾ ಮುಂತಾದವರು ಉಪಸ್ಥಿತರಿದ್ದರು