ಕಲಬುರಗಿ: ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಮಾನವ ಇಂದು ತನ್ನ ಜೀವನ ಸಾಗಿಸುತ್ತಿದ್ದು, ಶಾಂತಿ. ಸಮಾದಾನ, ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು ಸಂಗೀತದ ಮಹತ್ವ ತೋರಿಸುತ್ತದೆ ಎಂದು ಉದ್ಯಮಿ ಸಂತೋಷ ಗುತ್ತೇದಾರ ಹೇಳಿದರು.
ನಗರದ ಶಹಾಬಜಾರ ನಾಕಾ ಸಮೀಪ ನೂತನವಾಗಿ ಪ್ರಾರಂಭವಾದ ‘ಚಿತ್ರಲೇಖಾ ಸಂಗೀತ ಕಲಾವಿದರ ಸಂಘ’, ‘ಸುರಚಿತ್ರ ಮೆಲೋಡಿಸ್, ಕರೋಕೆ ಸಂಗೀತ ಕೋಚಿಂಗ್ ಕೇಂದ್ರ’ದ ಉದ್ಘಾಟನೆಯನ್ನು ಶನಿವಾರ ಸಂಜೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪ್ರಾಚೀನ ಕಾಲದಿಂದಲೂ ಸಂಗೀತವು ನಮ್ಮ ಸಂಸ್ಕøತಿಯ ಒಂದು ಭಾಗವಾಗಿ ಕಂಡು ಬರುತ್ತಿದೆ. ಹಿಂದಿನ ದಿನಗಳಲ್ಲಿ ಮನೆಯಲ್ಲಿ ಹಿರಿಯರು ಮಕ್ಕಳಿಗೆ ಹಾಡಿ, ಸಂತೋಷಗೊಳಿಸುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ ಇವೆಲ್ಲಾ ಮಾಯವಾಗುತ್ತಿವೆ. ನಮ್ಮ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ಸಂಗೀತ ಕಲಾವಿದರಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿದರೆ, ಅವರು ಸಮಾಜಕ್ಕೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ಮುಖ್ಯಸ್ಥೆ ಚಿತ್ರಲೇಖಾ ಗೋಲ್ಡಸ್ಮಿತ್ ಮತ್ತು ಸಂಗೀತ ಶಿಕ್ಷಕ ಶರಣು ಕಾಂಬಳೆ ಮಾತನಾಡಿ, ನಮ್ಮ ಭಾಗದಲ್ಲಿ ಮಕ್ಕಳು ಹಾಗೂ ಸಂಗೀತ ಆಸಕ್ತರಿಗೆ ಸಂಗೀತದ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದ ಸಂಘ ಮತ್ತು ಕೋಚಿಂಗ್ ಕೇಂದ್ರ ಪ್ರಾರಂಭಿಸಲಾಗಿದೆ. ನಮಗೆ ಹಣ ಗಳಿಕೆ ಉದ್ದೇಶವಲ್ಲ. ನಾವು ಕಲಿತ ಸಂಗೀತ ವಿದ್ಯೆ ನಾಲ್ಕು ಜನರಿಗೆ ಹಂಚಿದರೆ, ನಮ್ಮ ಭಾಗದ ಸಂಗೀತ ಕಲಾವಿದರು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ, ನಮ್ಮ ವಿದ್ಯೆ ಮತ್ತಷ್ಟು ಬೆಳೆಯುತ್ತದೆ ಎಂಬುದು ನಮ್ಮ ಆಶಯವಾಗಿದೆ. ಇದರಿಂದ ನಮಗೆ ಆತ್ಮತೃಪ್ತಿ ದೊರೆಯುತ್ತದೆ. ಇದಕ್ಕೆ ಸಂಗೀತ ಮನಸ್ಸುಗಳ ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಹವ್ಯಾಸಿ ಸಂಗೀತ ಕಲಾವಿದ ಪ್ರಕಾಶ ಸರಸಂಬಿ, ಪ್ರಮುಖರಾದ ಜಗು ಹುನ್ನಳ್ಳಿ, ಸಿದ್ದು ವಾಗ್ಮಾರೆ, ನಾಗೇಂದ್ರ ವಗ್ಮಾರೆ, ಸುಮಾ ಕವಲ್ದಾರ, ಸಂಗೀತಾ ವಾಗ್ಮಾರೆ, ರವಿ ಪಾಟೀಲ, ಪ್ರತೀಕ, ಪ್ರಶಾಂತ ಸರಸಂಬಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.