ಆಳಂದ; ಶಾಸಕ ಬಿ ಆರ್ ಪಾಟೀಲರು ಮುಖವಾಡ ಹಾಕಿರುವ ರಾಜಕಾರಣಿ ಅಧಿಕಾರಕ್ಕಾಗಿ ದಿನನಿತ್ಯ ಒಂದೊಂದು ಹೇಳಿಕೆ ನೀಡುತ್ತಾ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಂತೋಷ ಹಾದಿಮನಿ ಟೀಕಿಸಿದ್ದಾರೆ.
ಜಿ.ಪಂ ಮಾಜಿ ಸದಸ್ಯ ಸಿದ್ದಾರಾಮ ಪ್ಯಾಟಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಪ್ಯಾಟಿ ಅವರಿಗೆ ಈಗ ಅಭದ್ರತೆ ಕಾಡುತ್ತಿದೆ ಹೀಗಾಗಿ ಶಾಸಕರ ಮನ ಗೆಲ್ಲುವುದಕ್ಕಾಗಿ ಅವರ ಪರ ಹೇಳಿಕೆ ನೀಡುತ್ತಿದ್ದಾರೆ. ಸರಸಂಬಾ ಗ್ರಾಮದ ಬಿಜೆಪಿ ಮುಖಂಡ ಮಹಾಂತಪ್ಪ ಆಲೂರೆ ಕೊಲೆಯಲ್ಲಿ ಶಾಸಕರ ಕೈವಾಡ ಇರುವುದನ್ನು ಜನತೆ ಮಾತನಾಡಿ ಕೊಳ್ಳುತ್ತಿದ್ದಾರೆ. ಈಗ ಬಂಧಿಸಿರುವ ಕೊಲೆಯ ಒರ್ವ ಆರೋಪಿಗಳಲ್ಲಿ ಒಬ್ಬನು ಶಾಸಕ ಬಿ ಆರ್ ಪಾಟೀಲ ಬೆಂಬಲಿತನಾಗಿ ಒಂದು ಸಲ ಗ್ರಾ.ಪಂ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದಾರೆ.
2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗ ದಲಿತ ಸಮುದಾಯದ ರಾಹುಲ ಬೀಳಗಿ ಕೊಲೆ ಪ್ರಕರಣದಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮೂವರು ಆರೋಪಿಗಳ ಹೆಸರು ತೆಗಿಯಿಸಿ ಪ್ರಕರಣ ಮುಚ್ಚಿ ಹಾಕುವಂತೆ ಮಾಡಿದ್ದರು. ಶಾಸಕ ಬಿ ಆರ್ ಪಾಟೀಲ ಅವಧಿಯಲ್ಲಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.
ಬಿ ಆರ್ ಪಾಟೀಲ ಯಾವಾಗ್ಯಾವಾಗ ಶಾಸಕರಾಗಿದ್ದಾರೋ ಆವಾಗಾವಾಗ ತಾಲೂಕಿನಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿ ಜರುಗಿವೆ. ತೀರಾ ಇತ್ತೀಚಿಗೆ ಆಳಂದ ಪಟ್ಟಣದ ಹತ್ತಿರ ಚಂದ್ರಶೇಖರ ಚೌಲ ಎನ್ನುವ ಯುವಕನನ್ನು ಕೊಲೆ ಮಾಡಲಾಗಿದೆ ಇದು ಆಡಳಿತ ಯಂತ್ರದ ಸಂಪೂರ್ಣ ವಿಫಲತೆಯನ್ನು ಎತ್ತಿ ತೋರಿಸುತ್ತದೆ ಎಂದು ದೂರಿದರು.
ಬಂಧಿತ ವ್ಯಕ್ತಿಯನು ರಕ್ಷಣೆ ಮಾಡಲೆಂದೇ ಆಳಂದ ಶಾಸಕ ಬಿ ಆರ್ ಪಾಟೀಲ ಅವರ ಅಣ್ಣನ ಮಗ ಆರ್ ಕೆ ಪಾಟೀಲ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆರೋಪಿಯನ್ನು ಬಂಧಿಸಿದ ಕೆಲವೇ ಘಂಟೆಗಳಲ್ಲೇ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೆ ಅವಕಾಶ ಕೊಡದೇ ನ್ಯಾಯಾಂಗ ಬಂಧನ ವಶಕ್ಕೆ ತುರ್ತಾಗಿ ನೀಡಿದ್ದೇಕೆ?. ಇದಕ್ಕೆ ಸಿದ್ದಾರಾಮ ಪ್ಯಾಟಿ ಉತ್ತರಿಸಲಿ ಎಂದಿದ್ದಾರೆ.