ವಾಡಿ: ಕಾರ್ಮಿಕರ ಸಂಘಟನಾತ್ಮಕ ಶಕ್ತಿಯನ್ನು ಸಾಯಿಸಿ ದುಡಿಯುವ ವರ್ಗವನ್ನು ಗುಲಾಮರಂತೆ ಕಾಣುತ್ತಿರುವ ವಾಡಿ ಅದಾನಿ ಸಿಮೆಂಟ್ ಕಂಪನಿ (ಎಸಿಸಿ)ಗೆ ಪಾಠ ಕಲಿಸುವ ಕಾಲ ಬಂದಿದೆ ಎಂದಿದೆ ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಡಾ.ಮಹೇಶ ರಾಠೋಡ ಹೇಳಿದರು.
ಪಟ್ಟಣದಲ್ಲಿ ಏಳು ವರ್ಷಗಳ ನಂತರ ನಡೆಯುತ್ತಿರುವ ಎಸಿಸಿ ಕಾರ್ಮಿಕರ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಸಿಸಿ ಆಡಳಿತ ಕಾರ್ಮಿಕರು ಸಂಘಟಿತರಾಗುವುದನ್ನು ಮತ್ತು ಅನ್ಯಾಯಗಳ ವಿರುದ್ಧ ಪ್ರಶ್ನಿಸುವುದನ್ನು ಸಹಿಸುತ್ತಿಲ್ಲ. ತಾವು ಹೇಳಿದಂತೆ ಬಾಲ ಬಡಿಯುವ ಗುಲಾಮ ನಾಯಕರನ್ನು ಅದು ಬಯಸುತ್ತಿದೆ. ಇದೇ ಕಾರಣಕ್ಕೆ ಕಾರ್ಮಿಕರ ಸಂಘ ಎಐಟಿಯುಸಿಯ ಚುನಾವಣೆಯನ್ನು ತಡೆಯಲು ಷಢ್ಯಂತ್ರ ನಡೆಸುತ್ತಿದೆ. ಕಾರ್ಮಿಕರಲ್ಲೇ ಗುತ್ತಿಗೆ ಕಾರ್ಮಿಕರು ಮತ್ತು ನೌಕರರು ಎಂಬ ಬೇಧಭಾವ ಹುಟ್ಟಿಸಿ ಒಡಕು ಮೂಡಿಸಲು ಕಾರ್ಮಿಕರನ್ನೇ ಕಾರ್ಮಿಕರ ವಿರುದ್ಧ ಎತ್ತಿಕಟ್ಟುವ ಸತತ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ಕಸಿದುಕೊಂಡಿರುವ ಎಸಿಸಿ ಮ್ಯಾನೇಜಮೆಂಟ್, ಹಕ್ಕು ಮತ್ತು ಕರ್ತವ್ಯಗಳಿಂದ ವಂಚಿಸಿದೆ. ಊಟ, ವಸತಿ, ಶುದ್ಧ ಪರಿಸರ, ಕಾನೂನುಬದ್ಧ ಸೌಲಭ್ಯಗಳನ್ನು ನೀಡದೆ ಮೋಸ ಮಾಡಿದೆ.
ಕಾರ್ಖಾನೆಯ ಅನ್ಯಾಯಗಳ ವಿರುದ್ಧ ದನಿ ಎತ್ತಿದರೆ ಅಥವ ಪ್ರಶ್ನೆ ಮಾಡುವ ನಾಯಕನನ್ನು ಬೆಂಬಲಿಸಿದರೆ ಕಂಪನಿ ದ್ವೇಷ ಸಾಧಿಸುತ್ತಿದೆ. ನೌಕರಿಯಿಂದ ತೆಗೆದು ಹಾಕುವ ಅಥವ ಬೇರೆಡೆ ವರ್ಗಾವಣೆ ಮಾಡುವ ಬೆದರಿಕೆ ಹಾಕುತ್ತಿದೆ. ಕಂಪನಿ ಆಡಳಿತಕ್ಕೆ ಇಷ್ಟೊಂದು ಸೊಕ್ಕು ಬರಲು ಕಾರ್ಮಿಕರು ಒಗ್ಗಟ್ಟಾಗದಿರುವುದೇ ಕಾರಣ ಎಂದು ಸಮಾಧಾನ ವ್ಯಕ್ತಪಡಿಸಿದ ರಾಠೋಡ, ಇಂತಹ ಕುತಂತ್ರಗೇಡಿ ಶೋಷಕ ಕಂಪನಿಗೆ ಬುದ್ದಿ ಕಲಿಸಲು ಕಾರ್ಮಿಕರು ಒಗ್ಗಟ್ಟಾಗಬೇಕು.
ಕಾರ್ಮಿಕರಿಗೆ ನ್ಯಾಯ ಸಿಗಬೇಕು ಎಂದರೆ ಓರ್ವ ಎಐಟಿಯುಸಿ ಹೋರಾಟಗಾರ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಬೇಕಿದೆ. ಈ ಕಾರಣಕ್ಕೆ ಎಐಟಿಯುಸಿ ಜಿಲ್ಲಾಧ್ಯಕ್ಷರನ್ನು ಕಣಕ್ಕಿಳಿಸಲಾಗಿದೆ. ಅವರನ್ನು ಗೆಲ್ಲಿಸುವ ಮೂಲಕ ಗುಲಾಮಗಿರಿ ವ್ಯವಸ್ಥೆಗೆ ಅಂತ್ಯ ಹಾಡಬೇಕು ಎಂದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಕಾಮ್ರೇಡ್ ಎಚ್.ಎಸ್.ಪತಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪ್ರಭುದೇವ ಯಳಸಂಗಿ, ಶಹಾಬಾದ ಕಾರ್ಮಿಕ ನಾಯಕ ಕಾಮ್ರೇಡ್ ಅಬೆದುಲ್ಲಾ, ಶಾಮನಸನ್ ಈ.ರೆಡ್ಡಿ, ಖಾಸಿಮ್ ಕೊಲ್ಲೂರ, ಭಾಗಣ್ಣ ದೊರೆ, ಅನೀಲಕುಮಾರ ಶಿವಬೋ, ಬಸವರಾಜ ನಾಟೇಕರ, ನಾಸೀರ ಹುಸೇನ ಸೇರಿದಂತೆ ಎಸಿಸಿ ಕಾರ್ಮಿಕರು ಪಾಲ್ಗೊಂಡಿದ್ದರು.