ಕಲಬುರಗಿ; ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಜಿಲ್ಲೆಯ ಜೇವರ್ಗಿ, ಅಫಜಲಪೂರ ತಾಲೂಕಿಗೆ ಭೇಟಿ ನೀಡಿ ಚುನಾವಣೆ ಪೂರ್ವಸಿದ್ಧತೆ ಕಾರ್ಯ ಮತ್ತು ಕಟ್ಟುನಿಟ್ಟಿನ ಎಂ.ಸಿ.ಸಿ. ಜಾರಿ ಕುರಿತು ಪರಿಶೀಲಿಸಿದರು.
ಮೊದಲು ಜೇವರ್ಗಿ ತಾಲೂಕಿನ ಮಿನಿ ವಿಧನಸೌಧಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಸ್ಟರಿಂಗ್, ಡೀ-ಮಸ್ಟರಿಂಗ್, ಸ್ಟ್ರಾಂಗ್ ರೂಮ್ ಪರಿಶೀಲಿಸಿದರು. ಸಿಂಗಲ್ ವಿಂಡೋ ಸಿಸ್ಟಮ್ ಸಹ ನೋಡಿದರು. ಚುನಾವಣೆ ಕಾರ್ಯಕ್ಕೆ ನೇಮಿಸಲಾದ ವಿವಿಧ ತಂಡಗಳ ರಚನೆ ಕುರಿತು ತಹಶೀಲ್ದಾರ ಮಲ್ಲಣ್ಣ ಯಲಗೋಡ ಅವರಿಂದ ಮಾಹಿತಿ ಪಡೆದರು.
ನಂತರ ತಾಲೂಕಿನ ಗಡಿ ಗ್ರಾಮ ಜೇರಟಗಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಚೆಕ್ ಪೋಸ್ಟ್ ತಪಾಸಣೆ ಕಾರ್ಯ ವೀಕ್ಷಿಸಿದರು. ಇದೇ ಗ್ರಾಮದಲ್ಲಿ ಗುರುತಿಸಲಾದ ಕ್ರಿಟಿಕಲ್ ಮತಗಟ್ಟೆಗೂ ಭೇಟಿ ನೀಡಿದರು. ನಂತರ ಬೇಲೂರ ಗ್ರಾಮದ ಮತಗಟ್ಟೆ, ಅಂಕಲಗಾದಲ್ಲಿರುವ ಗುರುತಿಸಲಾದ ವಲನರೇಬಲ್ ಮತಗಟ್ಟೆ ಸಹ ವೀಕ್ಷಣೆ ಮಾಡಿದರು.
ಜಿಲ್ಲಾಧಿಕಾರಿಗೆ ಎಸ್.ಪಿ. ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ವೈ.ಎಸ್.ಪಿ ಬಿಂದುರಾಣಿ, ಜೇವರ್ಗಿ ತಾಲೂಕಿನ ಎ.ಆರ್.ಓ ಕೃಷ್ಣಾ ಸಾತ್ ನೀಡಿದರು.
ಅಫಜಲಪೂರ ತಾಲೂಕಿಗೂ ಭೇಟಿ: ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಜೇವರ್ಗಿ ತಾಲೂಕು ಪ್ರವಾಸ ಮುಗಿಸಿದ ನಂತರ ಅಪಜಲಪೂರ ತಾಲೂಕಿನ ಗಾಣಗಾಪೂರ ಗ್ರಾಮದಲ್ಲಿನ ಮತಗಟ್ಟೆ, ಚೌಡಾಪೂರ ಚೆಕ್ ಪೋಸ್ಟ್, ಮದರಾ ಬಿ. ಗ್ರಾಮದಲ್ಲಿನ ವಲನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆ ಸಂ.93ಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ ಸಂಜೀವಕುಮಾರ ದಾಸರ್ ಇದ್ದರು.