ಕಲಬುರಗಿ: ರಾವೂರ್ ಮಾರ್ಗವಾಗಿ ವಾಡಿ ಪಟ್ಟಣದತ್ತ ಆಕ್ರಮವಾಗಿ ಸಾಗಿದುತ್ತಿದ್ದ ಪಡಿತರ ಅಕ್ಕಿ ಹಾಗೂ ಟಂಟಂ ವಾಹನವನ್ನು ಪೊಲೀಸರು ಜಪ್ತಿ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ತಲಾ ಇಪ್ಪತ್ತು ಕೆ.ಜಿ ತೂಕದ ಒಂಭತ್ತು ಪಡಿತರ ಅಕ್ಕಿ ಚೀಲಗಳುಳ್ಳ 28350ರೂ. ಮೌಲ್ಯದ ಒಟ್ಟು ಎಂಟು ಕ್ವಿಂಟಲ್ ಪಡಿತರ ಅಕ್ಕಿಯನ್ನು ಆಹಾರ ಅಧಿಕಾರಿ ಶ್ರೀಕಾಂತ ದೇವದುರ್ಗ ಜಪ್ತಿ ಮಾಡಿದ್ದು, ಪಡಿತರ ಅಕ್ಕಿ ಹೊತ್ತು ರಾವೂರ ಮಾರ್ಗವಾಗಿ ವಾಡಿ ಪಟ್ಟಣದತ್ತ ಸಾಗುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಟಂಟಂ ವಾಹನ ತಡೆದು ಪರಿಶೀಲಿಸಿದಾಗ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ವೇಳೆ ಟಂಟಂ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಆಹಾರ ಇಲಾಖೆ ಅಧಿಕಾರಿ ಶ್ರೀಕಾಂತ್ ವಾಹನವನ್ನು ಅಕ್ಕಿ ಸಮೇತ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅಕ್ಕಿ ತುಂಬಿದ ವಾಹನ ವಶಕ್ಕೆ ಪಡೆದಿರುವ ವಾಡಿ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ ರೆಡ್ಡಿ, ಆಹಾರ ಇಲಾಖೆ ಅಧಿಕಾರಿ ಶ್ರೀಕಾಂತ್ ದೇವದುರ್ಗ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.